BELAGAVI

ಸಚಿವ ಸತೀಶ್ ಜಾರಕಿಹೊಳಿ ನಿವಾಸದೆದುರು ವಾಲ್ಮೀಕಿ ಸಮಾಜದ ಪ್ರತಿಭಟನೆ ‘ನಕಲಿ ಜಾತಿ ಪ್ರಮಾಣಪತ್ರ’ ಹಾವಳಿ ವಿರುದ್ಧ ‘ಮಾತಾಡಿ ಮಾತಾಡಿ’ ಅಭಿಯಾನ!

Share

ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ದಂಧೆಗೆ ಬ್ರೇಕ್ ಹಾಕುವಂತೆ ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ಕಾರ್ಯಕರ್ತರು ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮುಂದೆ ಧರಣಿ ಕುಳಿತು, ಸಮಾಜದ ಶಾಸಕರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂದು ಆಗ್ರಹಿಸಲಾಯಿತು.

ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆಯನ್ನು ತಡೆಗಟ್ಟುವಲ್ಲಿ ಶಾಸಕರ ವಿಫಲತೆಯನ್ನು ವಿರೋಧಿಸಿ ಮತ್ತು ಪರಿಶಿಷ್ಟ ಪಂಗಡದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಬೆಳಗಾವಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದೆದುರು ಪ್ರತಿಭಟನೆಯನ್ನು ನಡೆಸಲಾಯಿತು.

ನಕಲಿ ಪ್ರಮಾಣಪತ್ರಗಳನ್ನು ಪಡೆದು ಅಕ್ರಮವಾಗಿ ಹಲವಾರು ಸೌಲಭ್ಯಗಳನ್ನು ಮತ್ತು ವೈದ್ಯಕೀಯ ಪಶು ವೈದ್ಯಕೀಯ ಹುದ್ಧೆಗಳ ಲಾಭ ಪಡೆಯಲಾಗುತ್ತಿದೆ. ಇದರಿಂದಾಗಿ ಅರ್ಹರೂ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಮಾಜದ ಶಾಸಕರು ಸದನದಲ್ಲಿ ಇದರ ವಿರುದ್ಧ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯವನ್ನು ದೊರಕಿಸಿ ಕೊಡಬೇಕು. ಇದಕ್ಕಾಗಿಯೇ ಮಾತಾಡಿ ಮಾತಾಡಿ ಎಂಬ ಪ್ರತಿಭಟನೆಯನ್ನು ಎಲ್ಲ ಶಾಸಕರ ಮನೆ ಮುಂದೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಸಮಾಜಕ್ಕಿದ್ದ ಮೀಸಲಾತಿಯನ್ನು ಕಡಿತಗೊಳಿಸಿ ಹೊಸ ಕಾನೂನು ಜಾರಿ ತಂದಿರುವ ಸಚಿವರ ಮತ್ತು ಶಾಸಕರ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮಗೆ ಕಾನೂನುಬದ್ಧವಾದ ಮೀಸಲಾತಿಯನ್ನು ನೀಡಲೇಬೇಕು. ಇಲ್ಲದಿದ್ದರೇ ತೀವ್ರ ಹೋರಾಟ ನಡೆಸಲಾಗುವುದೆಂದು ಇನ್ನೋರ್ವ ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಬಾಂಧವರು ಭಾಗಿಯಾಗಿದ್ಧರು.

Tags:

error: Content is protected !!