Bagalkot

ಬಾಗಲಕೋಟೆ ಬ್ಲಾಸ್ಟಿಂಗ್ ಹಗರಣ: ಇನ್ ನ್ಯೂಜ್ ಇಂಪ್ಯಾಕ್ಟ್ – ಬಡ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ ಅಧಿಕಾರಿಗಳ ಮುಖವಾಡ ಕಳಚಿದ ವರದಿ!

Share

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ಕಳ್ಳಾಟ ಬಯಲಾಗಿದೆ. ಶಾಲೆ ಪಕ್ಕದಲ್ಲೇ ಅಕ್ರಮ ಬ್ಲಾಸ್ಟಿಂಗ್ ನಡೆಯುತ್ತಿದ್ದರೂ ‘ಏನೂ ನಡೆದಿಲ್ಲ’ ಎಂದು ವಾದಿಸಿದ್ದ ಅಧಿಕಾರಿಗಳು, ಈಗ ಇನ್ ನ್ಯೂಸ್ ವರದಿಯ ಬಿಸಿಗೆ ಬೆಚ್ಚಿಬಿದ್ದಿದ್ದಾರೆ. ಜಿಲ್ಲಾಧಿಕಾರಿಗಳ ತರಾಟೆಯ ಬಳಿಕ ಅನಿವಾರ್ಯವಾಗಿ ಎಫ್‌ಐಆರ್ ದಾಖಲಿಸಿರುವ ಅಧಿಕಾರಿಗಳ ಅಸಲಿ ಬೇಳೆ ಬೇಯಿಸಿಕೊಳ್ಳುವ ತಂತ್ರ ಈಗ ಬಯಲಿಗೆ ಬಂದಿದೆ.

ಮುಧೋಳ ತಾಲೂಕಿನ ಲೋಕಾಪುರ ಹೊರವಲಯದ ಸರ್ವೆ ನಂ. 161ರಲ್ಲಿ ಕೃಷಿ ಭೂಮಿ ಅಭಿವೃದ್ಧಿಯ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮೋರಂ ಲೂಟಿ ನಡೆಯುತ್ತಿತ್ತು. ಫೆಬ್ರವರಿ 26 ರಂದು ಸರ್ಕಾರಿ ಶಾಲೆಯ ಕೂಗಳತೆ ದೂರದಲ್ಲೇ ಅಕ್ರಮ ಬ್ಲಾಸ್ಟಿಂಗ್ ನಡೆಸಲಾಗಿತ್ತು. ಈ ವೇಳೆ ಸ್ಥಳೀಯರು ದೂರು ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಗಣಿ ಇಲಾಖೆ ಅಧಿಕಾರಿಗಳು, ಡ್ರಿಲ್ಲಿಂಗ್ ವಾಹನವನ್ನು ಸೀಜ್ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಮರುಕ್ಷಣವೇ ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿ, ‘ಬ್ಲಾಸ್ಟಿಂಗ್ ನಡೆದೇ ಇಲ್ಲ’ ಎಂಬ ಸುಳ್ಳು ನೆಪವೊಡ್ಡಿ ವಾಹನವನ್ನು ಬಿಡುಗಡೆ ಮಾಡುವ ಮೂಲಕ ಮಕ್ಕಳ ಜೀವದ ಜೊತೆ ಆಟವಾಡಿದ್ದರು.

ಅಧಿಕಾರಿಗಳ ಈ ಸಂಚನ್ನು ಇನ್ ನ್ಯೂಸ್ ಸಮೇತ ಬಿತ್ತರಿಸುತ್ತಿದ್ದಂತೆ ಜಿಲ್ಲಾಡಳಿತದಲ್ಲಿ ಸಂಚಲನ ಸೃಷ್ಟಿಯಾಯಿತು. ಮಾಧ್ಯಮದ ವರದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹಿರಿಯ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡ ಬಳಿಕ, ಮಾರ್ಚ್ 1 ರಂದು ಅನಿವಾರ್ಯವಾಗಿ ಲೋಕಾಪುರ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಹಾರಾಷ್ಟ್ರ ಮೂಲದ ಗುತ್ತಿಗೆದಾರ ಭಾವುಸಾಹೇಬ್ ಗೋಜೆ ಸೇರಿದಂತೆ ಮೂವರ ಮೇಲೆ ಕೇಸ್ ದಾಖಲಾಗಿದ್ದರೂ, ಎಫ್‌ಐಆರ್‌ನಲ್ಲಿ ಪ್ರಮುಖ ಸಾಕ್ಷಿಯಾದ ಡ್ರಿಲ್ಲಿಂಗ್ ವಾಹನದ ಉಲ್ಲೇಖವನ್ನೇ ಮರೆಮಾಚುವ ಮೂಲಕ ಅಧಿಕಾರಿಗಳು ದಂಧೆಕೋರರ ರಕ್ಷಣೆಗೆ ನಿಂತಿದ್ದಾರೆ.

ಕೇವಲ ಒಂದು ಲಕ್ಷ ರೂಪಾಯಿ ರಾಯಲ್ಟಿ ಕಟ್ಟಿಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಮಣ್ಣು ಸಾಗಾಟಕ್ಕೆ ಅಧಿಕಾರಿಗಳೇ ದಾರಿ ಮಾಡಿಕೊಟ್ಟಿರುವುದು ಈಗ ಜಗಜ್ಜಾಹೀರಾಗಿದೆ. ಎಫ್‌ಐಆರ್ ದಾಖಲಾದ ನಂತರವೂ ಆರೋಪಿಗಳನ್ನು ಬಂಧಿಸದೆ ರಕ್ಷಣೆ ಮಾಡುತ್ತಿರುವ ಅಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುದ್ಧಿ ವಾಹಿನಿಯಲ್ಲಿ ಬಿತ್ತರಿಸಿದ ಈ ವರದಿಯಿಂದಾಗಿ ಇಡೀ ಜಿಲ್ಲೆಯ ಅಕ್ರಮ ಗಣಿಗಾರಿಕೆಯ ಕರಾಳ ಮುಖ ಅನಾವರಣಗೊಂಡಿದೆ.

Tags:

error: Content is protected !!