ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಶೆಡ್ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಒಬ್ಬ ಆರೋಪಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ದಿನಾಂಕ 03-03-2026ರ ರಾತ್ರಿ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ. ಹಿರೇಬಾಗೇವಾಡಿಯಿಂದ ಮುತ್ನಾಳಕ್ಕೆ ಹೋಗುವ ಎನ್.ಹೆಚ್-4 ಸರ್ವಿಸ್ ರಸ್ತೆಯ ಪಕ್ಕದ ತಗಡಿನ ಶೆಡ್ ಮೇಲೆ ಅಬಕಾರಿ ನಿರೀಕ್ಷಕ ದುಂಡಪ್ಪಾ ಹಕ್ಕಿ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಮಾರಾಟದ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 553.96 ಲೀಟರ್ ಗೋವಾ ಮದ್ಯ ಹಾಗೂ 23.400 ಲೀಟರ್ ಬೀಯರ್ ಸೇರಿದಂತೆ ಒಟ್ಟು 3,77,500 ರೂಪಾಯಿ ಮೌಲ್ಯದ ಮುದ್ದೇಮಾಲನ್ನು ಜಪ್ತು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ನಾಳ ಗ್ರಾಮದ ಅರುಣ ರಾಜು ವಾಘಮೋರೆ (21) ಎಂಬಾತನಿಗೆ ಬಿಎನ್ಎಸ್ಎಸ್ ಕಾಯ್ದೆಯಡಿ ತನಿಖೆಗೆ ಹಾಜರಾಗಲು ನೋಟಿಸ್ ನೀಡಲಾಗಿದ್ದು, ಶೆಡ್ ಮಾಲೀಕನಿಗಾಗಿ ಶೋಧ ಮುಂದುವರಿದಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಡೀ ಕಾರ್ಯಾಚರಣೆಯನ್ನು ಡಿಜಿಟಲ್ ಸಾಕ್ಷ್ಯಕ್ಕಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ರವಿ ಎಂ ಮುರಗೋಡ ಹಾಗೂ ಸಿಬ್ಬಂದಿ ಸುನೀಲ ಪಾಟೀಲ ಭಾಗವಹಿಸಿದ್ದರು.
