ಬೆಳಗಾವಿ ಮಹಾನಗರ ಪಾಲಿಕೆ ಈಗ ತೆರಿಗೆಗಳ್ಳರ ವಿರುದ್ಧ ಸಮರ ಸಾರಿದೆ. MSME ಪ್ರಮಾಣಪತ್ರದ ನೆಪವೊಡ್ಡಿ ಪಾಲಿಕೆಗೆ ಬರಬೇಕಾದ ಆದಾಯಕ್ಕೆ ಕನ್ನ ಹಾಕುತ್ತಿರುವ ವರ್ತಕರಿಗೆ ಆಯುಕ್ತರು ಖಡಕ್ ವಾರ್ನಿಂಗ್ ನೀಡಿದ್ದಾರೆ. ವ್ಯಾಪಾರ ಪರವಾನಗಿ ಪಡೆಯದಿದ್ದರೆ ಅಂತಹ ಅಂಗಡಿಗಳಿಗೆ ಪಾಲಿಕೆಯಿಂದ ನೀಡುವ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.


ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12,000 ವರ್ತಕರಿದ್ದು, ಅದರಲ್ಲಿ ಸುಮಾರು 4,000 ಮಂದಿ MSME ಪ್ರಮಾಣಪತ್ರವನ್ನು ಹೊಂದಿ ಪಾಲಿಕೆಗೆ ವ್ಯಾಪಾರ ಪರವಾನಗಿ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪಾಲಿಕೆಗೆ ವಾರ್ಷಿಕ ಸುಮಾರು 4 ಲಕ್ಷ ರೂಪಾಯಿಗಳಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರೂ ವರ್ತಕರು ಸಹಕರಿಸದ ಹಿನ್ನೆಲೆಯಲ್ಲಿ, ಅಂತಹ ಮಳಿಗೆಗಳಿಗೆ ಪಾಲಿಕೆಯಿಂದ ಒದಗಿಸಲಾಗುವ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸಲು ಈಗ ಗಂಭೀರ ಚಿಂತನೆ ನಡೆಸಲಾಗಿದೆ.
ಆಯುಕ್ತರ ಕಟ್ಟುನಿಟ್ಟಿನ ಆದೇಶದಂತೆ ಇಂದು ಆರೋಗ್ಯ ನಿರೀಕ್ಷಕರ ತಂಡ ಸಮಾದೇವಿ ಗಲ್ಲಿಯ ‘ಕಲ್ಯಾಣಿ ಸ್ವೀಟ್ ಮಾರ್ಟ್’ ಹಾಗೂ ಖಡೇ ಬಜಾರ್ನ ‘ಲೆನ್ಸ್’ಕಾರ್ಟ್’ ಮಳಿಗೆಗಳ ಮೇಲೆ ದಾಳಿ ನಡೆಸಿತು. ವ್ಯಾಪಾರ ಪರವಾನಗಿ ಇಲ್ಲದೆ ವಹಿವಾಟು ನಡೆಸುತ್ತಿದ್ದ ಈ ಎರಡೂ ಸಂಸ್ಥೆಗಳಿಗೆ ತಲಾ 5,000 ರೂಪಾಯಿ ದಂಡ ವಿಧಿಸಲಾಗಿದೆ. ನಗರದ ಪ್ರತಿಯೊಬ್ಬ ಉದ್ದಿಮೆದಾರರು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆಯಬೇಕು, ತಪ್ಪಿದಲ್ಲಿ ಕೇವಲ ದಂಡ ಮಾತ್ರವಲ್ಲದೆ ಕಾನೂನು ಕ್ರಮದ ಜೊತೆಗೆ ಪಾಲಿಕೆಯ ಸೌಲಭ್ಯಗಳಿಂದಲೂ ವಂಚಿತರಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
