ಕ್ಷೇತ್ರದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ನಿಜವಾದ ಜನನಾಯಕನ ಲಕ್ಷಣ. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ತಾವು ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ ಬಾಂಧೂರಗಲ್ಲಿ ನಿವಾಸಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಾಂಧೂರಗಲ್ಲಿ, ಫೂಲಬಾಗ್ ಗಲ್ಲಿ ಹಾಗೂ ತಾಶೀಲ್ದಾರ್ ಗಲ್ಲಿಯ ನಿವಾಸಿಗಳ ದಶಕಗಳ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ. ಒಂದುವರೆ ತಿಂಗಳ ಹಿಂದೆ ಈ ಭಾಗದಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ಶಾಸಕ ಆಸೀಫ್ ಸೇಠ್ ಅವರು ಆಗಮಿಸಿದಾಗ, ಸ್ಥಳೀಯ ಮಹಿಳೆಯರು ಒಳಚರಂಡಿ (UGD) ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ರಸ್ತೆಗಿಂತ ಮೊದಲು ಯುಜಿಡಿ ದುರಸ್ತಿಪಡಿಸಬೇಕೆಂದು ಮನವಿ ಮಾಡಿದ್ದರು. ಜನರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸಿದ ಶಾಸಕರು, ರಸ್ತೆ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಯುಜಿಡಿ ಕಾಮಗಾರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ಈಗ ಯುಜಿಡಿ ಕೆಲಸ ಪೂರ್ಣಗೊಂಡಿದ್ದು, ಕುಡಿಯುವ ನೀರಿನ ಪೈಪ್ ಲೈನ್ ಸಂಪರ್ಕವನ್ನೂ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಇದೀಗ ಶಾಸಕರು ಮತ್ತೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಇಂದು ಫೂಲಬಾಗ್ ಗಲ್ಲಿ ಹತ್ತಿರ ರಸ್ತೆ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಬಾಂಧೂರಗಲ್ಲಿ ಸೇರಿದಂತೆ ಸುತ್ತಮುತ್ತಲಿನ ಗಲ್ಲಿಗಳಿಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ತಾವು ಬದ್ಧರಿರುವುದಾಗಿ ತಿಳಿಸಿದ್ದಾರೆ.

ಶಾಸಕರ ಈ ತ್ವರಿತ ನಡೆಗೆ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದು, “ನುಡಿದಂತೆ ನಡೆದ ಶಾಸಕರು” ಎಂದು ಶ್ಲಾಘಿಸಿದ್ದಾರೆ. ಮಹಿಳೆಯರು ತಮ್ಮ ವಾರ್ಡಿನಲ್ಲಿ ತಲೆದೋರಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸೇವಕ ಇಂದ್ರಜೀತ್ ಪಾಟೀಲ್, ಅಮಾನ್ ಸೇಠ್, ಲತಾ ಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
