Bagalkot

ಮುಧೋಳದಲ್ಲಿ ಹಣ ಡಬ್ಲಿಂಗ್ ವಂಚನೆ ಜಾಲ ಪತ್ತೆ: ಮಹೀಂದ್ರಾ ಎಸ್‌ಯುವಿ ಕಾರ್ ಮೇಲೆ ಕಲ್ಲು ತೂರಾಟ; 6 ಮಂದಿ ವಿರುದ್ಧ ಕೇಸ್!

Share

ರಾತ್ರೋರಾತ್ರಿ ಹಣ ಡಬಲ್ ಮಾಡುವ ಆಸೆಗೆ ಬಿದ್ದವರಿಗೆ ಖದೀಮರು ಸರಿಯಾಗಿಯೇ ನಾಮ ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹಣ ಡಬ್ಲಿಂಗ್ ಹೆಸರಲ್ಲಿ ವಂಚಿಸುತ್ತಿದ್ದ ಅಂತರಜಿಲ್ಲಾ ಗ್ಯಾಂಗ್ ಒಂದನ್ನು ಪೊಲೀಸರು ಪತ್ತೆಹಚ್ಚಿದ್ದು, ಸಿನಿಮಾ ಸ್ಟೈಲ್‌ನಲ್ಲಿ ಕಾರ್ ಬೆನ್ನಟ್ಟಿ ಕಲ್ಲು ತೂರಿದ ಘಟನೆ ವರದಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಕ್ರಾಸ್ ಬಳಿ ಹಣ ಡಬ್ಲಿಂಗ್ ಮಾಡುವ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಕೋಟಾ ನೋಟುಗಳನ್ನು ನೀಡಿ ಮೋಸ ಮಾಡುತ್ತಿದ್ದ ಈ ಜಾಲದ ವಿರುದ್ಧ ಈಗ ಮುಧೋಳ ಠಾಣೆಯಲ್ಲಿ ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಬೀಳಗಿಯ ದಾದೂ ಚೌಹಾಣ್, ಕೃಷ್ಣ ಪವಾರ್, ಮಹಾಲಿಂಗಪುರದ ದುಂಡಪ್ಪ ಒಣಶಣವಿ, ಗೂಡುಸಾಬ್ ನದಾಫ್, ದಾನೇಶ್ ಭಜಂತ್ರಿ ಮತ್ತು ರಾಯಬಾಗದ ದಿನಕರ್ ಎಂಬುವವರೇ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳು.

ನಿನ್ನೆ ರಾತ್ರಿ ಜಮಖಂಡಿ ಪಾಸಿಂಗ್ ಹೊಂದಿರುವ ಮಹೀಂದ್ರಾ ಎಸ್‌ಯುವಿ 700 ಕಾರ್‌ನಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಸಂಶಯಗೊಂಡ ಕೆಲವರು ಮಂಟೂರು ಕ್ರಾಸ್ ಬಳಿ ಕಾರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಣ ಕಳೆದುಕೊಂಡ ಸಂತ್ರಸ್ತರು ವಂಚಕರ ವಾಹನವನ್ನು ಬೆನ್ನಟ್ಟಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ವಶಕ್ಕೆ ಪಡೆದ ಓರ್ವ ವ್ಯಕ್ತಿಯ ವಿಚಾರಣೆ ನಡೆಸಿದಾಗ ಹಣ ಡಬ್ಲಿಂಗ್ ದಂಧೆಯ ಕರಾಳ ಮುಖ ಬಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, “ಈ ದಂಧೆಯ ಹಿಂದೆ ಯಾರಿದ್ದಾರೆ ಮತ್ತು ಓಡಿ ಹೋದ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು” ಎಂದು ತಿಳಿಸಿದ್ದಾರೆ. ವಶಪಡಿಸಿಕೊಂಡ ವಾಹನವು ದುಂಡಪ್ಪ ಒಣಶಣವಿ ಹೆಸರಿನಲ್ಲಿದ್ದು, ತನಿಖೆ ಚುರುಕುಗೊಂಡಿದೆ.

Tags:

error: Content is protected !!