ಐತಿಹಾಸಿಕ ಹಿನ್ನೆಲೆಯುಳ್ಳ ಬಾಗಲಕೋಟೆಯ ಹೋಳಿ ಹಬ್ಬಕ್ಕೆ ಇಂದು ನಸುಕಿನ ವೇಳೆಯೇ ಅಧಿಕೃತ ಚಾಲನೆ ದೊರೆತಿದೆ. ನಗರದ ಕಿಲ್ಲಾ ಗಲ್ಲಿಯಲ್ಲಿ ಬಸವಪ್ರಭು ಸರನಾಡಗೌಡರು ಹಲಗೆ ಬಾರಿಸುವ ಮೂಲಕ ಕಾಮದಹನ ಪ್ರಕ್ರಿಯೆಗೆ ಚಾಲನೆ ನೀಡಿದರು.

ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲಗೆಯ ಸದ್ದಿಗೆ ಮಕ್ಕಳು, ಯುವಕರು ಹಾಗೂ ಹಿರಿಯರು ಎನ್ನದೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಕಾಮದಹನದ ನಂತರ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದ ಜನತೆ, ಬಾಗಲಕೋಟೆಯ ಸೌಹಾರ್ದತೆಯ ಹಬ್ಬಕ್ಕೆ ಸಾಕ್ಷಿಯಾದರು.
ಇಂದು ಇಡೀ ದಿನ ನಗರದಾದ್ಯಂತ ವಿವಿಧೆಡೆ ಕಾಮದಹನ ಪ್ರಕ್ರಿಯೆ ನಡೆಯಲಿದ್ದು, ನಾಳೆಯಿಂದ ಅಸಲಿ ರಂಗು ಶುರುವಾಗಲಿದೆ. ಹಬ್ಬದ ಪ್ರಯುಕ್ತ ಬಾಗಲಕೋಟೆ ಹಳೆ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲಿ ಸತತ ಮೂರು ದಿನಗಳ ಕಾಲ ಅದ್ಧೂರಿ ‘ರೇನ್ ಡ್ಯಾನ್ಸ್’ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ವಯೋವೃದ್ಧರಿಂದ ಹಿಡಿದು ಯುವ ಪೀಳಿಗೆಯವರೆಗೆ ಇಡೀ ಬಾಗಲಕೋಟೆ ಬಣ್ಣದ ಕಡಲಲ್ಲಿ ತೇಲಲಿದೆ.
