BELAGAVI

ಬೆಳಗಾವಿಯಲ್ಲಿ ಸಂಭ್ರಮದ ಹೋಳಿ ಹಬ್ಬ: ಹೋಳಿ ಮಿಲನದಲ್ಲಿ ಕುಣಿದು ಕುಪ್ಪಳಿಸಿದ ಯುವಜನತೆ ; ಅಶ್ವಥಾಮಾ ಮಂದಿರದಲ್ಲಿ ಭಕ್ತರ ಉರುಳು ಸೇವೆ!

Share

ಕುಂದಾನಗರಿ ಬೆಳಗಾವಿಯಲ್ಲಿ ಹೋಳಿ ಹಬ್ಬದ ಅಬ್ಬರ ಜೋರಾಗಿತ್ತು. ಬಣ್ಣಗಳ ಹಬ್ಬದ ಅಂಗವಾಗಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಆಯೋಜಿಸಲಾದ ‘ಹೋಳಿ ಮಿಲನ’ ಕಾರ್ಯಕ್ರಮವು ಜನಾಕರ್ಷಣೆಯ ಕೇಂದ್ರಬಿಂದುವಾಯಿತು. ಪಾಂಗುಳ್ ಗಲ್ಲಿಯ ಉರುಳು ಸೇವೆಗೆ ಯುವಜನತೆ ಸಾಕ್ಷಿಯಾಯಿತು.

ಕುಂದಾನಗರಿ ಬೆಳಗಾವಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು., ಇಡೀ ನಗರವು ಭಾವೈಕ್ಯದ ಬಣ್ಣಗಳಲ್ಲಿ ಮಿಂದೆದ್ದಿತ್ತು, ಬೆಳಗಾವಿ ಹೋಳಿಯ ಖ್ಯಾತಿ ಜಾಗತಿಕ ಮಟ್ಟಕ್ಕೆ ಹಬ್ಬಿರುವುದು ಸಾಬೀತಾಯಿತು. ನಗರದ ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು, ಮಹಿಳೆಯರು ಎಂಬ ಭೇದವಿಲ್ಲದೆ ಎಲ್ಲರೂ ಬಣ್ಣದೋಕುಳಿಯಲ್ಲಿ ಮಿಂದೆದ್ದು ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸಿದರು. ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಶಾಸಕ ಅಭಯ್ ಪಾಟೀಲ್ ಆಯೋಜಿಸಿದ್ದ ‘ಹೋಳಿ ಮಿಲನ’ ಕಾರ್ಯಕ್ರಮವು ಅತ್ಯಂತ ವೈಭವದಿಂದ ಜರುಗಿತು. ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆಯ ಸೂಪರ್ ಹಿಟ್ ಹಾಡುಗಳಿಗೆ ಸಾವಿರಾರು ಯುವಕ-ಯುವತಿಯರು ಸಂಭ್ರಮದಿಂದ ಹೆಜ್ಜೆ ಹಾಕಿದರು. ಬೆಳಗಾವಿಯ ಈ ಬಣ್ಣದ ಲೋಕಕ್ಕೆ ವಿದೇಶಿ ಪತ್ರಕರ್ತೆಯರು ಸಹ ಆಗಮಿಸಿ ವರದಿ ಮಾಡುತ್ತಿದ್ದು, ಇಲ್ಲಿನ ಹೋಳಿ ಹಬ್ಬ ಇಡೀ ವಿಶ್ವದ ಗಮನ ಸೆಳೆದಿರುವುದಕ್ಕೆ ಸಾಕ್ಷಿಯಾಯಿತು.

ಕಳೆದ 15 ವರ್ಷಗಳಿಂದ ನಿರಂತರವಾಗಿ ಈ ಹೋಳಿ ಮಿಲನವನ್ನು ಆಯೋಜಿಸುತ್ತಾ ಬಂದಿರುವ ಶಾಸಕ ಅಭಯ್ ಪಾಟೀಲ್, ಈ ಸಂದರ್ಭದಲ್ಲಿ ಮಾತನಾಡಿ, “ಬೆಳಗಾವಿಯ ಹೋಳಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಇಲ್ಲಿನ ಜನರಿಗೆ ಸಲ್ಲುತ್ತದೆ. ಇಡೀ ದೇಶವೇ ಬೆಳಗಾವಿ ಹೋಳಿಗಾಗಿ ಕಾತರದಿಂದ ಕಾಯುತ್ತದೆ” ಎಂದು ಹೆಮ್ಮೆಯಿಂದ ನುಡಿದರು. ಗ್ರಹಣದ ಯಾವುದೇ ಭೀತಿ ಅಥವಾ ಪರಿಣಾಮವಿಲ್ಲದೆ ಸಾವಿರಾರು ಜನರು ಒಂದಾಗಿ ಬಣ್ಣದ ಮಳೆಯಲ್ಲಿ ಮಿಂದೆದ್ದರು.

ಇತ್ತ ಪಾಂಗುಳ್ ಗಲ್ಲಿಯಲ್ಲೂ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ದೇಶದ ಎರಡನೇ ಅಶ್ವಥಾಮಾ ಮಂದಿರ ಎಂಬ ಹೆಗ್ಗಳಿಕೆಯ ಶ್ರೀ ಅಶ್ವಥಾಮಾ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಹರಕೆ ಹೊತ್ತ ಸಾವಿರಾರು ಭಕ್ತರು ಮಂದಿರದ ಆವರಣದಲ್ಲಿ ಉರುಳು ಸೇವೆ ಮಾಡುವ ಮೂಲಕ ಶ್ರದ್ಧಾಭಕ್ತಿಯಿಂದ ಹೋಳಿ ಆಚರಿಸಿದರು. ಹಲಗೆ ನಾದ ಮತ್ತು ಉರುಳು ಸೇವೆ ಮಾಡುವವರ ಮೇಲೆ ಎರಚುವ ನೀರು ನೋಡುಗರನ್ನು ಬೆರಗಾಗಿಸಿತು. ಸಾಂಪ್ರದಾಯಿಕ ಆಚರಣೆ ಮತ್ತು ಆಧುನಿಕ ಡಿಜೆ ಸಂಭ್ರಮದ ಸಮಾಗಮದೊಂದಿಗೆ ಬೆಳಗಾವಿ ಇಂದು ವರ್ಣರಂಜಿತವಾಗಿ ಕಂಗೊಳಿಸುತ್ತಿದೆ.

Tags:

error: Content is protected !!