ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಇಂದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಸಭೆಯ ಮಧ್ಯಭಾಗಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದ್ದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.


ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯ ಶಾಹೀದ್ ಪಠಾಣ್ ಅವರು ಠರಾವು ಸೇರಿದಂತೆ ಯಾವುದೇ ಮಾಹಿತಿಯನ್ನು ನೀಡಿದರೂ ಅಧಿಕಾರಿಗಳು ಯಾಕೆ ಮಾಹಿತಿ ನೀಡುತ್ತಿಲ್ಲ. ಯಾರ ಒತ್ತಡಕ್ಕೆ ಮಣಿದಿದ್ದೀರಿ? ಅಥವಾ ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಕಾರಣವನ್ನು ಕೇಳಿದರು. ಇದಕ್ಕೆ ನಗರಸೇವಕ ರಿಯಾಝ್ ಕಿಲ್ಲೇದಾರ ಕೂಡ ಧ್ವನಿಗೂಡಿಸಿದರು. ವಿರೋಧ ಪಕ್ಷದ ಸದಸ್ಯರು ಮಹಾಪೌರರ ಮುಂಭಾಗಕ್ಕೆ ತೆರಳಿ ಪ್ರತಿಭಟನೆಗೆ ಮುಂದಾದರು.

ಅಧಿಕಾರಿಗಳು ಇದಕ್ಕೆ ಉತ್ತರ ನೀಡಬೇಕೆಂದು ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ ಅವರು ಕೇಳಿದಾಗ ಮಾಹಿತಿ ತಯಾರಿದ್ದು, ತೆಗೆದುಕೊಂಡು ಹೋಗಿ ಎಂದಾಗ ಸೋಮವಾರ ಪರಿಷತ್ತಿನಲ್ಲಿ ಪಡೆಯುವುದಾಗಿ ಹೇಳಿದ್ದಾರೆಂದಾಗ ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ ಅವರು ವಿರೋಧ ಪಕ್ಷದ ಸದಸ್ಯ ಶಾಹೀದ್ ಖಾನ್ ಪಠಾಣ್ ಅವರನ್ನು ಮರುಪ್ರಶ್ನಿಸಿ, ಸಭೆಯನ್ನು ನಡೆಸಲು ಅವಕಾಶ ನೀಡದೇ ಸಮಯ ಹಾಳು ಮಾಡಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದರು . ಈ ವೇಳೆ ಪಕ್ಷ-ವಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಮಹಾಪೌರ ಮಂಗೇಶ್ ಪವಾರ್ ಅವರು ಸದಸ್ಯ ಶಾಹೀದ್ ಖಾನ್ ಪಠಾಣ್ ಅವರಿಗೆ ಸದ್ಯ ನಡಾವಳಿಯಲ್ಲಿರುವ ವಿಷಯಗಳನ್ನು ಚರ್ಚಿಸಿ ನಂತರ ಉಳಿದ ವಿಷಯಗಳನ್ನು ಚರ್ಚಿಸಲು ಸಹಕಾರ ನೀಡಬೇಕೆಂದರು.
