ನಾಳೆ ಸಂಭವಿಸಲಿರುವ ರಕ್ತ ಚಂದ್ರಗ್ರಹಣದ ಛಾಯೆ ಗಡಿ ಜಿಲ್ಲೆ ಬೆಳಗಾವಿಯ ಮೇಲೆಯೂ ಬೀರಿದೆ. ಗ್ರಹಣದ ಹಿನ್ನೆಲೆಯಲ್ಲಿ ನಗರದ ಸುಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಗರ್ಭಗುಡಿಯ ಬಾಗಿಲನ್ನು ಮುಚ್ಚಲು ನಿರ್ಧರಿಸಲಾಗಿದೆ. ಗ್ರಹಣದ ವೇಳೆ ಹೋಳಿ ಬಣ್ಣದಾಟ ಆಡುವುದು ಸೂಕ್ತವಲ್ಲ ಎಂದು ಅರ್ಚಕರು ಭಕ್ತರಲ್ಲಿ ಮನವಿ ಮಾಡಿದ್ದಾರೆ.


ನಾಳೆ ಸಂಭವಿಸಲಿರುವ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಗ್ಗೆ ಎಂದಿನಂತೆ ಪೂಜೆ ನೆರವೇರಲಿದ್ದು, ಬಳಿಕ ಸ್ವಯಂಭೂ ಶಿವಲಿಂಗವನ್ನು ಬಿಲ್ವಪತ್ರೆಗಳಿಂದ ಸಂಪೂರ್ಣವಾಗಿ ಮುಚ್ಚಿಡಲಾಗುವುದು. ಗ್ರಹಣದ ಸೂತಕದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುವುದು. ಸಂಜೆ 7 ಗಂಟೆಗೆ ಮರು ಆರಂಭಗೊಂಡು, ಶುದ್ಧೀಕರಣ ಹಾಗೂ ಅಭಿಷೇಕದ ನಂತರ ರಾತ್ರಿ 9 ಗಂಟೆಗೆ ದರ್ಶನಕ್ಕೆ ತೆರೆ ಬೀಳಲಿದೆ.

ಗ್ರಹಣವು ಹೋಳಿ ಹುಣ್ಣಿಮೆಯಂದೇ ಬಂದಿರುವುದರಿಂದ ಭಕ್ತರಿಗೆ ಕಪಿಲೇಶ್ವರ ಮಂದಿರದ ಅರ್ಚಕರು ವಿಶೇಷ ಮನವಿ ಮಾಡಿದ್ದಾರೆ. ಗ್ರಹಣದ ಅವಧಿಯಲ್ಲಿ ಬಣ್ಣದಾಟ ಆಡುವುದು ಶಾಸ್ತ್ರೋಕ್ತವಾಗಿ ಸರಿಯಲ್ಲ, ಹೀಗಾಗಿ ಮಾರ್ಚ್ 4ರಂದು ಹೋಳಿ ಆಚರಿಸುವುದು ಉತ್ತಮ ಎಂದು ತಿಳಿಸಿದ್ದಾರೆ. ಗ್ರಹಣದ ಕಾಲದಲ್ಲಿ ಗರ್ಭಿಣಿಯರು ಮತ್ತು ಮಕ್ಕಳು ದೇವರ ನಾಮಸ್ಮರಣೆ ಮಾಡುವುದು ಶ್ರೇಯಸ್ಕರ. ಇನ್ನು ಗ್ರಹಣದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯೊಳಗೆ ಅಡುಗೆ ಸಿದ್ಧಪಡಿಸಿ ಅದರಲ್ಲಿ ಧುರ್ವಾ ಹುಲ್ಲನ್ನು ಹಾಕಿಡಬೇಕು ಹಾಗೂ ಗ್ರಹಣ ಸ್ಪರ್ಶದ ಮೊದಲೇ ಊಟ ಮುಗಿಸಬೇಕು ಎಂದು ಧಾರ್ಮಿಕ ಮಾರ್ಗದರ್ಶನ ನೀಡಲಾಗಿದೆ. ಬೈಟ್
