Bailahongala

ಬೆಳವಡಿ ಮಲ್ಲಮ್ಮ ಉತ್ಸವ: ಕುಸ್ತಿ ಅಖಾಡದಲ್ಲಿ ಅಂತಾರಾಷ್ಟ್ರೀಯ ಪೈಲ್ವಾನರ ಅಬ್ಬರ; ಪುಣೆಯ ಅಜಯ್‌ಗೆ ಜಯಮಾಲೆ

Share

ಬೆಳವಡಿ ಮಲ್ಲಮ್ಮನ ಉತ್ಸವದ ಸಮಾರೋಪದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳ ಮೈನವಿರೇಳಿಸಿದವು. ಬ್ರೆಜಿಲ್ ಸೇರಿದಂತೆ ವಿವಿಧ ರಾಜ್ಯಗಳ ಪೈಲ್ವಾನರು ಈ ಐತಿಹಾಸಿಕ ಅಖಾಡದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ 2026ರ ‘ಬೆಳವಡಿ ಮಲ್ಲಮ್ಮ ಉತ್ಸವ’ವು ಅದ್ದೂರಿ ಕುಸ್ತಿ ಅಖಾಡದೊಂದಿಗೆ ತೆರೆಕಂಡಿತು. ತಾಲೂಕಿನ ಬೆಳವಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಈ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪುರುಷ ಮತ್ತು ಮಹಿಳಾ ಪೈಲ್ವಾನರು ಭಾಗವಹಿಸಿ ಕ್ರೀಡಾ ಪ್ರೇಮಿಗಳ ಮನ ಗೆದ್ದರು. ಒಟ್ಟು 36 ಜೋಡಿ ಪುರುಷ ಪೈಲ್ವಾನರು ಹಾಗೂ 5 ಜೋಡಿ ಮಹಿಳಾ ಪೈಲ್ವಾನರು ಅಖಾಡದಲ್ಲಿ ಪರಸ್ಪರ ಸೆಣಸಾಡುವ ಮೂಲಕ ಉತ್ಸವದ ಕಳೆಯನ್ನು ಇಮ್ಮಡಿಗೊಳಿಸಿದರು.


ಸಾರ್ವಜನಿಕರ ಹರ್ಷೋದ್ಗಾರದ ನಡುವೆ ನಡೆದ ಪುರುಷರ ವಿಭಾಗದ ನಂಬರ್ 1 ಕುಸ್ತಿಯಲ್ಲಿ, ಬ್ರೆಜಿಲ್‌ನ ಖ್ಯಾತ ಪೈಲ್ವಾನ್ ಪ್ರಡೆಲ್ಲಾ ಲಿಮಾ ಹಾಗೂ ಪುಣೆಯ ಅಜಯ್ ನಡುವೆ ರೋಚಕ ಹೋರಾಟ ನಡೆಯಿತು. ತುರುಸಿನ ಪೈಪೋಟಿಯ ನಂತರ ಪುಣೆಯ ಅಜಯ್ ಅವರು ವಿದೇಶಿ ಪೈಲ್ವಾನನನ್ನು ಮಣಿಸಿ ಜಯಭೇರಿ ಬಾರಿಸಿದರು. ಇನ್ನು ಮಹಿಳೆಯರ ವಿಭಾಗದ ಹೈವೋಲ್ಟೇಜ್ ಪಂದ್ಯದಲ್ಲಿ ಮಹಾರಾಷ್ಟ್ರದ ಸಚಿತಾ ಮೊರೆ ಅವರು ದುರ್ಗಾ ನಾಯಕ ವಿರುದ್ಧ ರೋಚಕ ಗೆಲುವು ಸಾಧಿಸಿದರು. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಕುಸ್ತಿ ಅಖಾಡವು ವಿಜೇತ ಪೈಲ್ವಾನರ ಸಂಭ್ರಮಕ್ಕೆ ಸಾಕ್ಷಿಯಾಯಿತು.

Tags:

error: Content is protected !!