ಬಾಗಲಕೋಟೆ ನಗರದಲ್ಲಿ ಇಂದು ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಹೈ-ಅಲರ್ಟ್ ಘೋಷಿಸಿದೆ. ಕಳೆದ ಬಾರಿ ಕಲ್ಲು ತೂರಾಟ ನಡೆದಿದ್ದ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಸೀದಿಗಳನ್ನು ಪರದೆಯಿಂದ ಮರೆಮಾಚುವ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ನಗರದ ಪಂಕಾ ಮಸೀದಿ ಮುಂಭಾಗದ ರಸ್ತೆಯಲ್ಲಿ ಶೋಭಾಯಾತ್ರೆ ಸಾಗಲಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಸೀದಿಯ ಮುಂಭಾಗದಲ್ಲಿ ರಸ್ತೆಯ ಎರಡೂ ಕಡೆ ಸುಮಾರು 15 ಅಡಿ ಎತ್ತರದ ಬೃಹತ್ ಪರದೆಗಳನ್ನು ಅಳವಡಿಸಲಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಚೋದನಾಕಾರಿ ಘಟನೆಗಳು ಸಂಭವಿಸಬಾರದು ಮತ್ತು ಮಸೀದಿಯ ಆವರಣ ಕಾಣದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಇದೇ ಮಾರ್ಗದಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ನಗರದ ಪ್ರಮುಖ ವೃತ್ತಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಿಸಲಾಗಿದ್ದು, ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಾಂತಿಯುತವಾಗಿ ಶೋಭಾಯಾತ್ರೆ ನಡೆಸಲು ಸಂಘಟಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಇಡೀ ಬಾಗಲಕೋಟೆ ನಗರ ಸದ್ಯ ಪೊಲೀಸ್ ಪೇರೆಯಂತಾಗಿದೆ.
