ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಿಚ್ಚು ಹೊತ್ತಿಕೊಂಡ ಬೆನ್ನಲ್ಲೇ, ವಿಮಾನಯಾನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಬಾಗಲಕೋಟೆ ಮೂಲದ ಯುವ ಇಂಜಿನಿಯರ್ ಒಬ್ಬರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ತಾಯ್ನಾಡಿಗೆ ಮರಳಲು ಹರಸಾಹಸ ಪಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ನಿವಾಸಿಯಾಗಿರುವ ಗಿರಿಮಲ್ಲಪ್ಪ ಕೆರೂರು (ಗಿರೀಶ್), ಬೆಂಗಳೂರಿನ ಐಡಿಇಎಂಐಎ (IDEMIA) ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ನಿಮಿತ್ತ ಪ್ಯಾರಿಸ್‌ಗೆ ತೆರಳಲು ಫೆಬ್ರವರಿ 28ರಂದು ಮುಂಜಾನೆ ಬೆಂಗಳೂರಿನಿಂದ ಹೊರಟಿದ್ದ ಇವರು, ಸಂಪರ್ಕ ವಿಮಾನಕ್ಕಾಗಿ ದುಬೈಗೆ ತಲುಪಿದ್ದರು. ಆದರೆ ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಅಬುದಾಬಿಯಿಂದ ಪ್ಯಾರಿಸ್‌ಗೆ ತೆರಳಬೇಕಿದ್ದ ವಿಮಾನ ಹಾರಾಟವನ್ನು ದಿಢೀರ್ ರದ್ದುಗೊಳಿಸಲಾಗಿದೆ. ಸದ್ಯ ಅಬುದಾಬಿಯ ‘ಯಾಸ್ ಪ್ಲಾಜಾ ಬೇ’ ಹೋಟೆಲ್‌ನಲ್ಲಿ ಎತಿಹಾಡ್ ಏರ್‌ವೇಸ್ ಕಲ್ಪಿಸಿರುವ ವಸತಿಯಲ್ಲಿ ಗಿರೀಶ್ ಆಶ್ರಯ ಪಡೆದಿದ್ದಾರೆ. ಈ ಕುರಿತು ಸೆಲ್ಫಿ ವಿಡಿಯೋ ಹಂಚಿಕೊಂಡಿರುವ ಅವರು, “ಸದ್ಯಕ್ಕೆ ಇಲ್ಲಿ ಸುರಕ್ಷಿತವಾಗಿದ್ದೇನೆ, ಆದರೆ ಪ್ಯಾರಿಸ್ ಪ್ರಯಾಣ ಅನಿಶ್ಚಿತವಾಗಿದೆ. ವಿಮಾನಯಾನ ಕಾರ್ಯಾಚರಣೆ ಯಾವಾಗ ಪುನರಾರಂಭವಾಗುತ್ತದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಪ್ಯಾರಿಸ್ ಪ್ರವಾಸ ರದ್ದುಗೊಳಿಸಿ ಹೇಗಾದರೂ ಮಾಡಿ ಭಾರತಕ್ಕೆ ಮರಳಿದರೆ ಸಾಕು ಎನಿಸುತ್ತಿದೆ” ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
