ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಹಕ್ಕುಗಳಿಂದಲೇ ಇಂದು ನಾವು ಗೌರವದ ಬದುಕು ನಡೆಸುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಮಹತ್ವ ಮತ್ತು ಬಸವಣ್ಣನವರ ವಿಚಾರಧಾರೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.


ಭೂಮಿ ಇರುವವರೆಗೆ ವಿಶ್ವಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ, ಇಲ್ಲಿರುವ ಕೆಲವು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ದೊರೆಯುತ್ತಿರಲಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜ ಕಾರ್ಯ ವಿಭಾಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ. ಬಿ. ಎಸ್. ಜಿರಗೆ ಸಭಾಭವನದಲ್ಲಿ ಆಯೋಜಿಸಿದ್ದ ” ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಡಾ. ಬಿ. ಆರ್. ಅಂಬೇಡ್ಕರ್” ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅನೇಕರು ಸಚಿವ ಸ್ಥಾನ, ಶಾಸಕ ಸ್ಥಾನ ಅಲಂಕರಿಸಿದ್ದಾರೆ, ಆದರೆ ಬಹಳಷ್ಟು ಜನ ಅವರನ್ನು ಗುರುತಿಸುವುದು ವಿರಳ. ಆದರೆ ನಾನು ವಿಶ್ವಗರು ಬಸವಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿ ಎಂದು ಜನರು ರಾಜ್ಯಾದ್ಯಂತ ನನ್ನನ್ನು ಗುರುತಿಸುತ್ತಿದ್ದಾರೆ ಎಂದರು.
ಜಗಜ್ಯೋತಿ ಬಸವೇಶ್ವರರು ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನಂತೆ ಜಾತಿ ಮುಕ್ತ ಭಾರತವನ್ನು ಕಟ್ಟುವುದು ಅತ್ಯವಶ್ಯಕವಾಗಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಈ ಕಾರ್ಯಕ್ರಮ ಮತ್ತೊಮ್ಮೆ ಸಮಾಜದ ಕಣ್ಣನ್ನು ತೆರೆಸಿದೆ. ಮಹಾತ್ಮರ ವಿಚಾರಗಳನ್ನು ಪ್ರಚುರಪಡಿಸಬೇಕು. ಬಾಬಾಸಾಹೇಬರು ಸಂವಿಧಾನ ಬರೆಯದಿದ್ದರೇ, ಇಂದು ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿರುತ್ತಿದ್ದರು. ನಾವು ಶಾಸಕರು ಕೂಡ ಆಗಿರಲಿಲ್ಲ. ಬದುಕಿಗೆ ದಾರಿದೀಪವಾದವರು ಯಾರೂ ಎಂಬುದನ್ನು ತಿಳಿಸಬೇಕಾದ ಸಂದರ್ಭ ಬಂದೊದಗಿರುವುದು ದುರ್ದೈವದ ಸಂಗತಿ ಎಂದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಬುದ್ಧನ ಮೂರ್ತಿ ನೀಡಿ ಸತ್ಕರಿಸಲಾಯಿತು. ಇನ್ನು ನನ್ನ ಅಂಬೇಡ್ಕರ್ ಎಂಬ ನಾಕಟ ಪ್ರದರ್ಶಿಸಿದ ತಂಡಕ್ಕೆ 25 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಕುಲಪತಿ ಪ್ರೊ. ಸಿ. ಎಂ ತ್ಯಾಗರಾಜ ಅಧ್ಯಕ್ಷೆತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ಆಸೀಪ್ ಸೇಠ್, ವಾ.ಕ.ರ.ಸಾ.ಸಂಸ್ಥೆ ಉಪಾಧ್ಯಕ್ಷ ಸುನೀಲ ಹಣಮನ್ನವರ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ, ಡಾ. ಸಾಬಿರ್ ಅಹ್ಮದ್ ಮುಲ್ಲಾ, ಮೈಸೂರು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ. ಜೆ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ಎನ್. ಪಾಟೀಲ್, ಕುಲಪತಿಗಳಾದ ಸಿ.ಎಂ. ತ್ಯಾಗರಾಜ್, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಅಶೋಕ್ ಡಿಸೋಜಾ, ಡಾ. ರಾಜೇಂದ್ರ ಗೋಂಧಳೆ, ಡಾ. ರಾಜಪ್ಪ ದಳವಾಯಿ, ಸ್ವಪ್ನಾ ಎಂ., ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
