ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ಕರ್ನಾಟಕದ ಹೆಮ್ಮೆಯ ಸಂಕೇತವಾಗಿ ಸಂಪುಟದಲ್ಲಿ ಚರ್ಚಿಸಿ ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಎಂದು ಮರುನಾಮಕರಣ ಮಾಡಲಾಗುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.



ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಶನಿವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ಅದ್ಧೂರಿ ಸಮಾರಂಭ ಜರುಗಿತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನೂತನ ಬಸ್ಸುಗಳ ಲೋಕಾರ್ಪಣೆ, ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶಾಸಕ ರಾಜು ಕಾಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತು ಶಾಸಕ ಅಶೋಕ ಪಟ್ಟಣ ಸೇರಿದಂತೆ ಹಲವು ಗಣ್ಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.


ಉತ್ತರ ಶಾಸಕ ಆಸೀಫ್ ಸೇಠ್ ಅವರು ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಾದಾಗಿನಿಂದ ಕಿತ್ತೂರು ಕರ್ನಾಟಕಕ್ಕೆ ಒಳ್ಳೆಯ ಬಸ್ಸುಗಳನ್ನು ಒದಗಿಸಿದ್ದಾರೆ. ಗ್ಯಾರಂಟಿಗಳು ರಾಜ್ಯದಲ್ಲಿ ಯಶಸ್ವಿಯಾಗಿದ್ದು ನಮ್ಮನ್ನು ಟೀಕಿಸಿದವರೇ ಈಗ ನಮ್ಮ ನಕಲು ಮಾಡುತ್ತಿದ್ದಾರೆ. ನಗರಕ್ಕೆ 100 ಇಲೆಕ್ಟ್ರಿಕ್ ಬಸ್ಸುಗಳನ್ನು ಒದಗಿಸಲಾಗುತ್ತಿದೆ. ಅಲ್ಲಿಯ ವರೆಗೂ ಬೆಳಗಾವಿ ನಗರದ ಬಸ್ ಕೊರತೆಯನ್ನು ಸರಿಯಾಗಿ ನಿರ್ವಹಿಸಬೇಕೆಂದರು. ಅಲ್ಲದೇ ಸಿಎಂ ಡಿಸಿಎಂ ಸೇರಿದಂತೆ ಹಲವಾರು ಸಚಿವರು ದಕ್ಷಿಣ ಕರ್ನಾಟಕದವರೇ ಆಗಿದ್ದು ಅವರ ಒಲವು ಉತ್ತರ ಕರ್ನಾಟಕದ ಮೇಲೆ ಅಷ್ಟಿಲ್ಲ. 2ನೇ ರಾಜಧಾನಿ ಎಂದು ಕರೆಯುವ ಬೆಳಗಾವಿಗೆ ಹಕ್ಕಿನ ಸೌಲಭ್ಯಗಳನ್ನು ಒದಗಿಸಿ. ಇಲ್ಲದಿದ್ದರೇ, ಮುಂದಿನ ದಿನಗಳಲ್ಲಿ ಸಿಎಂ ಸ್ಥಾನ ಹೊಂದುವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 250 ಹೊಸ ಅತ್ಯಾಧುನಿಕ ಬಸ್’ಗಳನ್ನು ಬೆಳಗಾವಿಗೆ ನೀಡಿ ಬಹುದಿನಗಳ ಕನಸು ನನಸಾಗಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಾರಿಗೆ ಸೇವೆ ದೇವರ ಕೆಲಸ ಎಂದರು. ಪ್ರಯಾಣಿಕರನ್ನು ಅವರ ಗಂತವ್ಯದ ವರೆಗೂ ಸುರಕ್ಷಿತವಾಗಿ ಪ್ರಯಾಣ ಬೆಳೆಸಲು ಚಾಲಕರು ನಿರ್ವಾಹಕರು ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾದದ್ದು. ಇನ್ನು ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟವನ್ನು ದಿಕ್ಕು ತಪ್ಪಿಸಲು ಹೋಗಿ ಸ್ವತಃ ಮುಜುಗರಕ್ಕೊಳಗಾದ ಬಿಜೆಪಿಗರು ತಮ್ಮ ಸರ್ಕಾರದಲ್ಲಿ ಒಂದೇ ಒಂದು ಹೊಸ ಬಸ್ಸನ್ನು ತರಲು ಆಗದೇ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾದಾಗಾನಿಂದ ಇಡೀ ರಾಜ್ಯದಲ್ಲಿ 7800 ಹೊಸ ಬಸ್ಸುಗಳನ್ನು ಖರೀದಿಸಲಾಗಿದೆ. ಕೆ.ಎಸ್.ಆರ್.ಟಿಯಲ್ಲಿ 10 ಸಾವಿರ ನೇಮಕಾತಿಗಳನ್ನು ಹೊಸದಾಗಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈಗಾಗಲೇ ಹೊಸ ಬಸ್ಸುಗಳನ್ನು ಖರೀದಿಸಿದ್ದು, ಇನ್ನು ಹೊಸ ಬಸ್ಸುಗಳನ್ನು ಖರೀದಿಸುತ್ತೇವೆ. ಬೆಳಗಾವಿಯ ಹೊಸ ಕೇಂದ್ರ ಬಸ್ ನಿಲ್ದಾಣವನ್ನು ಕೂಡ ನಿರ್ಮಿಸಲಾಗಿದೆ. ಕಿತ್ತೂರು ನಿಲ್ದಾಣ ಸೇರಿದಂತೆ ಹಲವೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅನುಕಂಪದ ಆಧಾರದ ಮೇಲೆ ಮೃತರ ಕುಟುಂಬದವರಿಗೆ ನೌಕರಿ ನೀಡುವ ಪ್ರಕ್ರಿಯೆಯನ್ನು ಮರು ಆರಂಭಿಸಲಾಗಿದ್ದು, ಸುಮಾರು 10 ಸಾವಿರ ಜನರಿಗೆ ನೌಕರಿ ನೀಡಲಾಗಿದೆ. ಸಿಬ್ಬಂದಿಗಳಿಗೆ ಹೊಸ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಾಯವ್ಯ ರಸ್ತೆ ಸಾರಿಗೆಗೆ ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿಡಲೂ ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಿಸಲಾಯಿತು ಹಾಗೂ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತು. ಅಲ್ಲದೆ, ಎಸ್‌ಬಿಐ ವತಿಯಿಂದ ವಿಮಾ ಮೊತ್ತದ ಚೆಕ್ ವಿತರಣೆ ಮತ್ತು ಅತ್ಯುತ್ತಮ ಅಧಿಕಾರಿಗಳಿಗೆ ಪುರಸ್ಕಾರ ನೀಡಲಾಯಿತು. ಸಮಾರಂಭದಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಕೆಎಸ್‌ಎಫ್‌ಸಿ ಅಧ್ಯಕ್ಷ ಮಹಾಂತೇಶ ಕೌಜಲಗಿ, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮತ್ತು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸೇರಿದಂತೆ ಉನ್ನತ ಅಧಿಕಾರಿಗಳಾದ ಎಸ್.ಬಿ. ಶೆಟ್ಟೆಣ್ಣವರ, ದೀಪಾ ಚೋಳನ್, ಜಾನಕಿ ಕೆ.ಎಂ., ಚೇತನ್ ಸಿಂಗ್ ರಾಠೋರ್, ರಾಹುಲ್ ಶಿಂಧೆ ಮತ್ತು ಕೆ. ರಾಮರಾಜನ್ ಉಪಸ್ಥಿತರಿದ್ದರು.

