Khanapur

ಖಾನಾಪೂರದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಜಾಲ ಪತ್ತೆ: ಓಮ್ನಿ ವಾಹನ ಸಮೇತ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು.

Share

ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಖಾನಾಪೂರ ಪೊಲೀಸರು ಭೇದಿಸಿದ್ದಾರೆ. ಓಮ್ನಿ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಯುವಕನನ್ನು ಪೊಲೀಸರು ವಾಹನ ಸಮೇತ ವಶಕ್ಕೆ ಪಡೆದಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಬೆಳಗಾವಿ ಕಡೆಗೆ ಸಾಗಿಸುತ್ತಿದ್ದ ಖಾನಾಪೂರ ಗಾಂಧಿನಗರದ ಅಜಾಜ್ ಸಿಕಂದರ್ ಶಿರಸಂಗಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಖಾನಾಪೂರದ ಇಂದಿರಾನಗರ ಕ್ರಾಸ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಂದಾಜು ₹8,120 ಮೌಲ್ಯದ 232 ಕಿಲೋ ರೇಷನ್ ಅಕ್ಕಿಯನ್ನು ಹಾಗೂ ಸಾಗಾಟಕ್ಕೆ ಬಳಸಿದ್ದ ಓಮ್ನಿ ವಾಹನವನ್ನು ಜಪ್ತಿ ಮಾಡಿದ್ದಾರೆ. ಆರೋಪಿಯು ಸಣ್ಣ ಮೊತ್ತಕ್ಕೆ ಅಕ್ಕಿ ಸಂಗ್ರಹಿಸಿ, ಹೆಚ್ಚಿನ ಲಾಭಕ್ಕಾಗಿ ನಗರ ಪ್ರದೇಶದ ಕಡೆಗೆ ಸಾಗಿಸಲು ಯತ್ನಿಸಿದ್ದನು ಎಂದು ತಿಳಿದುಬಂದಿದೆ.
ಈ ಸಂಬಂಧ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಅಧಿನಿಯಮದಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದಂಧೆಯಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಈ ಅಕ್ಕಿಯ ಮೂಲ ಯಾವುದು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಡವರ ಹೊಟ್ಟೆ ಸೇರಬೇಕಾದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Tags:

error: Content is protected !!