ಬೆಳಗಾವಿ ನಗರದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಚೂರಿ ಇರಿಯುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈಗ ಫೀಲ್ಡ್‌ಗೆ ಇಳಿದಿದೆ. ಚಾಕು-ಚೂರಿ ಹಿಡಿದು ಓಡಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕಮೀಷನರ್ ಭೂಷಣ್ ಬೋರಸೆ ಅವರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.


ಬೆಳಗಾವಿ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಣಿ ಚೂರಿ ಇರಿತದ ಪ್ರಕರಣಗಳು ವರದಿಯಾಗುತ್ತಿದ್ದು, ಇದನ್ನು ಹತ್ತಿಕ್ಕಲು ನಗರ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ‘ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್’ ಚಿಸಿ ಖಡಕ್ ಆದೇಶ ಹೊರಡಿಸಿದ್ದಾರೆ. ಕಳೆದ ಜೂನ್‌ನಿಂದ ಈವರೆಗೆ ಸುಮಾರು 41 ಪ್ರಕರಣಗಳು ದಾಖಲಾಗಿದ್ದು, 60ಕ್ಕೂ ಹೆಚ್ಚು ಜನರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಮಾರ್ಕೆಟ್ ಹಾಗೂ ಖಡೇಬಜಾರ್ ವಿಭಾಗಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿದ್ದು, ಪೊಲೀಸರು ಹಗಲು-ರಾತ್ರಿ ವಾಹನ ತಪಾಸಣೆ ಮತ್ತು ಗಸ್ತು ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಅಥವಾ ಕಂಟ್ರಿ ಪಿಸ್ತೂಲ್ ಹಿಡಿದು ಭಯ ಹುಟ್ಟಿಸುವವರನ್ನು ಈಗಾಗಲೇ ಬಂಧಿಸಲಾಗಿದ್ದು, ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ತಕ್ಷಣವೇ ರೌಡಿಶೀಟ್ ತೆರೆಯುವುದಾಗಿ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲೂ ಚಾಕು ಮತ್ತು ಚೂರಿಗಳು ಪತ್ತೆಯಾಗುತ್ತಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಕ್ಷುಲ್ಲಕ ಕಾರಣಗಳಿಗಾಗಿ ಜಗಳ ಮಾಡಿಕೊಳ್ಳುವ ಯುವಕರು ಆವೇಶದಲ್ಲಿ ಚೂರಿ ಇರಿಯುವ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ಆವರಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪ್ರತಿದಿನ ಅನಿರೀಕ್ಷಿತ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಮಾಳಮಾರುತಿ ಪೊಲೀಸರು ಪಿಸ್ತೂಲ್ ಮತ್ತು ಆಯುಧ ಹೊಂದಿದ್ದವರನ್ನು ಬಂಧಿಸುವ ಮೂಲಕ ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಆಯುಧ ಸಂಸ್ಕೃತಿಗೆ ಬೆಂಬಲ ನೀಡುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಪೋಷಕರು ಕೂಡ ತಮ್ಮ ಮಕ್ಕಳ ನಡವಳಿಕೆ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
