ತುಮಕೂರಿನಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ ಎಂದು ಸಮರ್ಥಿಸಿಕೊಂಡರು. ವಿರೋಧ ಪಕ್ಷಗಳು ಮಾಡುತ್ತಿರುವ ಅಪಪ್ರಚಾರವನ್ನು ತಳ್ಳಿಹಾಕಿದ ಅವರು, ಲಕ್ಷಾಂತರ ಕೋಟಿ ರೂಪಾಯಿ ನೇರವಾಗಿ ಬಡವರ ಕೈ ಸೇರುತ್ತಿದೆ, ಇದರಿಂದ ಜನರ ಆರ್ಥಿಕ ಮಟ್ಟ ಸುಧಾರಿಸುತ್ತಿದೆ ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿಯ ಬೃಹತ್ ಕಾರ್ಯಾಗಾರದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ ಎಂದು ಸಮರ್ಥಿಸಿಕೊಂಡರು. ವಿರೋಧ ಪಕ್ಷಗಳು ಮಾಡುತ್ತಿರುವ ಅಪಪ್ರಚಾರವನ್ನು ತಳ್ಳಿಹಾಕಿದ ಅವರು, ಲಕ್ಷಾಂತರ ಕೋಟಿ ರೂಪಾಯಿ ನೇರವಾಗಿ ಬಡವರ ಕೈ ಸೇರುತ್ತಿದೆ, ಇದರಿಂದ ಜನರ ಆರ್ಥಿಕ ಮಟ್ಟ ಸುಧಾರಿಸುತ್ತಿದೆ ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಇಂದು ತುಮಕೂರಿನ ಕಾರ್ಯಾಗಾರಕ್ಕೆ 5 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಆಗಮಿಸಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿ ಎಂದರು. ಇದೇ ವೇಳೆ ಶಾಸಕ ವಿನಯ್ ಕುಲಕರ್ಣಿಗೆ ರಿಲೀಫ್ ಸಿಕ್ಕ ವಿಚಾರವಾಗಿ ಪ್ರತಿಕ್ರಿಯಿಸಿ, ಕಾನೂನಿನ ಚೌಕಟ್ಟಿನಲ್ಲಿ ಆಗುವ ತೀರ್ಮಾನಗಳನ್ನು ಸ್ವಾಗತಿಸುವುದಾಗಿ ಹೇಳಿದರು.
ಇನ್ನು ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಹಣ ಪಾವತಿ ವಿಳಂಬವಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಹಿಂದಿನ ಸರ್ಕಾರ ಸುಮಾರು 1.40 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಬಿಲ್ ಉಳಿಸಿ ಹೋಗಿದೆ ಎಂದು ಆರೋಪಿಸಿದರು. ಹಂತ ಹಂತವಾಗಿ ನಾವು ಹಣವನ್ನು ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ ಎಂದು ಭರವಸೆ ನೀಡಿದರು. ಗುತ್ತಿಗೆದಾರರು ಸಾಲ ಮಾಡಿ ಕೆಲಸ ಮಾಡಿರುತ್ತಾರೆ, ಅವರ ಕಷ್ಟ ನಮಗೆ ಅರ್ಥವಾಗುತ್ತದೆ; ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಸಚಿವರು ಈ ಬಗ್ಗೆ ಈಗಾಗಲೇ ಚರ್ಚಿಸಿದ್ದು, ಉಳಿದ ಹಣವನ್ನೂ ಶೀಘ್ರವೇ ಪಾವತಿಸಲಾಗುವುದು ಎಂದರು. ಇದೇ ವೇಳೆ ಡಿ.ಕೆ. ಶಿವಕುಮಾರ್ ಬಣದ ಶಾಸಕರ ಸಭೆಯ ಕುರಿತ ಪ್ರಶ್ನೆಗೆ, ಅದೊಂದು ಹುಟ್ಟುಹಬ್ಬದ ಸಂಭ್ರಮಾಚರಣೆಯಷ್ಟೇ, ಅದರಲ್ಲಿ ವಿಶೇಷವೇನಿಲ್ಲ ಎಂದು ಸರಳವಾಗಿ ಉತ್ತರಿಸಿದರು.
ಸಚಿವ ಸಂಪುಟ ಸಭೆಯಿಂದ ಅಸಮಾಧಾನಗೊಂಡು ಹೊರಬಂದಿದ್ದಾರೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದ ಪರಮೇಶ್ವರ್, “ನಾನು ಯಾಕೆ ಬೇಜಾರಾಗಲಿ? ಅದೆಲ್ಲವೂ ಸತ್ಯಕ್ಕೆ ದೂರವಾದ ಮಾತು” ಎಂದು ಸ್ಪಷ್ಟನೆ ನೀಡಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನುಮಾನ ಎಂಬ ಶಾಸಕ ಬಾಲಕೃಷ್ಣ ಅವರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಿರಬಹುದು, ಆದರೆ ಅಂತಿಮವಾಗಿ ಜನಸಮುದಾಯವೇ ತೀರ್ಮಾನ ಮಾಡಲಿದೆ ಎಂದು ಮಾರ್ಮಿಕವಾಗಿ ನುಡಿದರು.
