Bagalkot

ಬಾಗಲಕೋಟೆಯಲ್ಲಿ ಕಲ್ಲು ತೂರಾಟದ ಕಿಚ್ಚು: NIA ತನಿಖೆಗೆ ಶ್ರೀರಾಮುಲು ಪತ್ರ; ಡಿಸಿ ಕಚೇರಿ ಮುಂದೆ ಹಿಂದೂ ಸಂಘಟನೆಗಳ ಬೃಹತ್ ಧರಣಿ

Share

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಈಗ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ ಪಡೆದುಕೊಂಡಿದೆ. ಘಟನೆಯನ್ನು ಖಂಡಿಸಿ ಇಂದು ಹಿಂದೂ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇತ್ತ ಮಾಜಿ ಸಚಿವ ಶ್ರೀರಾಮುಲು ಅವರು ಪ್ರಕರಣವನ್ನು NIA ತನಿಖೆಗೆ ಒಪ್ಪಿಸುವಂತೆ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಬಾಗಲಕೋಟೆ ನಗರದ ನವನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆತದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾರ್ಯಕರ್ತರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಸದ ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹಾಗೂ ಅರವಿಂದ ಬೆಲ್ಲದ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ. ಹಳೆಯ ಬಾಗಲಕೋಟೆಯಲ್ಲಿ 163ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ನಗರದಾದ್ಯಂತ ಐವರು ಎಸ್‌ಪಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮತ್ತೊಂದೆಡೆ, ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವಂತೆ ಮಾಜಿ ಸಚಿವ ಶ್ರೀರಾಮುಲು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ಸರಣಿ ದಾಳಿಗಳ ಹಿಂದೆ ವ್ಯವಸ್ಥಿತ ಸಂಚಿರುವ ಸಾಧ್ಯತೆಯಿದ್ದು, ಡಿಜೆ ಹಳ್ಳಿ ಹಾಗೂ ಬಾಗಲಕೋಟೆ ಪ್ರಕರಣಗಳನ್ನು ಎನ್ಐಎ ತನಿಖೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನೂರಾರು ಕಾರ್ಯಕರ್ತರು ಪಂಕಾ ಮಸೀದಿ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Tags:

error: Content is protected !!