ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ನಡೆದ ಆರ್ಎಸ್ಎಸ್ ತಾಲೂಕಾಧ್ಯಕ್ಷ ದತ್ತಾ ಥೋರಾವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಈಗ ಸಂಚಲನ ಮೂಡಿಸಿದೆ. ಆರಂಭದಲ್ಲಿ ಈ ಘಟನೆ ಕೋಮು ಸಂಘರ್ಷದ ಬಣ್ಣ ಪಡೆದಿತ್ತಾದರೂ, ಈಗ ಪೊಲೀಸರು ಹೊರಹಾಕಿರುವ ಸತ್ಯಾಂಶಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಕೇವಲ ವರ್ಚಸ್ಸು ಮತ್ತು ಅಧಿಕಾರದಾಸೆಗಾಗಿ ಸ್ವಪಕ್ಷೀಯರೇ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ.


ಹುಕ್ಕೇರಿ ತಾಲೂಕಿನ ಆರ್ಎಸ್ಎಸ್ ಮುಖಂಡರಾದ ದತ್ತಾ ಥೋರಾವತ್ ಹಾಗೂ ಸಮೀರ್ ಪಾಟೀಲ್ ನಡುವೆ ಮೊದಲಿನಿಂದಲೂ ತಾಲೂಕಾಧ್ಯಕ್ಷ ಪಟ್ಟ ಹಾಗೂ ವರ್ಚಸ್ಸಿಗಾಗಿ ತೀವ್ರ ಪೈಪೋಟಿ ಇತ್ತು. ಈ ದ್ವೇಷ ಕೇವಲ ಇವರಿಬ್ಬರಿಗೆ ಸೀಮಿತವಾಗದೆ, ಅವರ ಶಿಷ್ಯರಾದ ರಾಕೇಶ್ ಮತ್ತು ಶ್ಯಾಮ ನಡುವೆಯೂ ಸದಾ ಒಳಜಗಳಕ್ಕೆ ಕಾರಣವಾಗಿತ್ತು. ದತ್ತಾ ಅವರ ಬೆಳೆಯುತ್ತಿರುವ ಪ್ರಭಾವವನ್ನು ಸಹಿಸದ ಸಮೀರ್ ಪಾಟೀಲ್ ತಂಡ, ಅವರನ್ನು ಶಾಶ್ವತವಾಗಿ ಮುಗಿಸಲು ಸ್ಕೆಚ್ ಹಾಕಿತ್ತು. ಇದಕ್ಕಾಗಿ ಮಹಾರಾಷ್ಟ್ರದ ಇಚಲಕರಂಜಿಯ ಕುಖ್ಯಾತ ರೌಡಿ ಸಂಕೇತ್ ಮೇತ್ರಿಗೆ ಸುಪಾರಿ ನೀಡಲಾಗಿತ್ತು. ಸಂಕೇತ್ ತನ್ನ ಗ್ಯಾಂಗ್ನೊಂದಿಗೆ ಸಂಕೇಶ್ವರಕ್ಕೆ ಬಂದು ಸಮೀರ್ನ ಹೊಲದ ಮನೆಯಲ್ಲೇ ಎರಡು ದಿನ ವಾಸ್ತವ್ಯ ಹೂಡಿ, ದತ್ತಾ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ನಿಡಸೋಸಿ ರಸ್ತೆಯ ಆದರ್ಶ ನಗರದ ಸಾಯಿ ಕಲ್ಯಾಣ ಮಂಟಪದ ಹತ್ತಿರ ಬೈಕ್ ಮೇಲೆ ತೆರಳುತ್ತಿದ್ದ ದತ್ತಾ ಅವರನ್ನು ಆಲ್ಟೋ ಕಾರಿನಲ್ಲಿ ಹಿಂಬಾಲಿಸಿದ ಈ ಸುಪಾರಿ ಕಿಲ್ಲರ್ಗಳು, ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ತಲ್ವಾರ್ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ದತ್ತಾ ಅವರನ್ನು ಕಂಡು ಸ್ಥಳೀಯರು ಕಂಗಾಲಾಗಿದ್ದರು. ಸ್ಥಳಕ್ಕೆ ಆಗಮಿಸಿದ ಸಂಕೇಶ್ವರ ಪೋಲಿಸರು ಗಾಯಾಳು ಶ್ರೀಕಾಂತನನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ಧಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಗಡಿಂಗ್ಲಜ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ನಡೆದ ಸ್ಥಳಕ್ಕೆ ಬೆಳಗಾವಿ ಪೋಲಿಸ್ ವರಿಷ್ಟಾಧೀಕಾರಿ ಕೆ ರಾಮರಾಜನ್ ಭೇಟಿ ಕೂಡ ನೀಡಿ ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಅರಿತ ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪೂರೆ ಅವರು ಯಾವುದೇ ಪೂರ್ವಗ್ರಹವಿಲ್ಲದೆ ತನಿಖೆ ಆರಂಭಿಸಿದ್ದರು. ಆರೋಪಿಗಳ ಕಾಲ್ ಹಿಸ್ಟರಿ ಹಾಗೂ ಟವರ್ ಲೊಕೇಶನ್ ಬೆನ್ನತ್ತಿದಾಗ ಇಚಲಕರಂಜಿಯ ನಂಟು ಪತ್ತೆಯಾಗಿದೆ. ಸಂಕೇತ್, ಸುನೀಲ್, ಸೂರಜ್ ಮತ್ತು ಶ್ಯಾಮನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಸಂಘಟನೆಯ ಒಳಜಗಳವೇ ಹಲ್ಲೆಗೆ ಮೂಲ ಕಾರಣ ಎಂಬ ಕರಾಳ ಸತ್ಯ ಹೊರಬಿದ್ದಿದೆ.

ಸದ್ಯ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದು, ಪರಾರಿಯಾಗಿರುವ ಉಳಿದ ಇಬ್ಬರಿಗಾಗಿ ಬಲೆ ಬೀಸಿದ್ದಾರೆ. ಆರಂಭದಲ್ಲಿ ಈ ಹಲ್ಲೆಯನ್ನು ಕೋಮು ವಿವಾದವೆಂದು ಬಿಂಬಿಸಲು ಕಿಡಿಗೇಡಿಗಳು ಪ್ರಯತ್ನಿಸಿದ್ದರೂ, ಸಿಪಿಐ ಜಾವೀದ್ ಮುಶಾಪೂರೆ ಅವರ ತೀಕ್ಷ್ಣ ತನಿಖೆ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಕೇವಲ ಅಧಿಕಾರಕ್ಕಾಗಿ ಜೀವ ತೆಗೆಯಲು ಮುಂದಾದ ಸ್ವಪಕ್ಷೀಯರ ಈ ಕೃತ್ಯದ ಬಗ್ಗೆ ಸಂಕೇಶ್ವರದಾದ್ಯಂತ ತೀವ್ರ ಚರ್ಚೆಗಳು ಶುರುವಾಗಿದ್ದು, ಪೊಲೀಸ್ ಇಲಾಖೆಯ ಚಾಣಾಕ್ಷತನಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
