Kagawad

ಸರ್ಕಾರದ ಸಹಕಾರವಿಲ್ಲದೆ 60 ರೈತರಿಂದ ಸ್ವಂತ ಖರ್ಚಿನಲ್ಲಿ ‘ಸವಳು-ಜವಳು’ ಭೂಮಿ ಸುಧಾರಣೆ: ಮೊಳವಾಡ ಗ್ರಾಮದ ರೈತರ ಸಾಹಸ

Share

ರೈತರು ದೇಶದ ಬೆನ್ನೆಲುಬು” ಎಂದು ರಾಜಕೀಯ ಮುಖಂಡರು ವೇದಿಕೆಗಳ ಮೇಲೆ ಭಾಷಣ ಮಾಡುವುದು ಸಾಮಾನ್ಯ. ಆದರೆ ಸಂಕಷ್ಟದಲ್ಲಿರುವ ರೈತರಿಗೆ ಪ್ರತ್ಯಕ್ಷವಾಗಿ ನೆರವಾಗಲು ಯಾರೂ ಮುಂದೆ ಬರುತ್ತಿಲ್ಲ ಎಂಬುದಕ್ಕೆ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮದ ಈ ಘಟನೆಯೇ ಸಾಕ್ಷಿ. ಇಲ್ಲಿನ ರೈತರು ಸರ್ಕಾರದ ಹಂಗಿಲ್ಲದೆ, ತಮ್ಮ ಜಮೀನು ಉಳಿಸಿಕೊಳ್ಳಲು ತಾವೇ ಹಣ ಹೊಂದಿಸಿ ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದಾರೆ.
ಅತಿಯಾದ ನೀರಾವರಿಯಿಂದಾಗಿ ಮೊಳವಾಡ ಗ್ರಾಮದ ಸುಮಾರು 500 ಎಕರೆಗೂ ಅಧಿಕ ಜಮೀನು ಸವಳು-ಜವಳು (ಉಪ್ಪು ಮಿಶ್ರಿತ ಭೂಮಿ) ಆಗಿ ಮಾರ್ಪಟ್ಟಿದೆ. ಇಲ್ಲಿ ಯಾವುದೇ ಬೆಳೆ ಬೆಳೆಯಲು ಅಸಾಧ್ಯವಾದ ಕಾರಣ, ರೈತರು ಕಂಗಾಲಾಗಿದ್ದರು. ಈ ಬಗ್ಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇಸತ್ತ 60 ಜನ ರೈತರು ಒಗ್ಗೂಡಿ, ತಮ್ಮ ಮನೆಯಲ್ಲಿದ್ದ ಹಸುಗಳನ್ನು ಮಾರಾಟ ಮಾಡಿ ಹಾಗೂ ಬ್ಯಾಂಕುಗಳಲ್ಲಿ ಸಾಲ ಪಡೆದು ಸುಮಾರು ಒಂದು ಕೋಟಿ ರೂಪಾಯಿ ನಿಧಿ ಸಂಗ್ರಹಿಸಿದ್ದಾರೆ.

ಈ ಕುರಿತು ಯುವ ರೈತರಾದ ಸಚಿನ್ ನಿಂಗನೂರೆ ಮತ್ತು ಸತೀಶ್ ಬಿರಾದಾರ್ ಮಾತನಾಡಿ, “ನಮ್ಮ ಜಮೀನುಗಳು ಸವಳುಗೊಂಡು ಹಾಳಾಗುತ್ತಿವೆ ಎಂದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬಳಿ ಅಲೆದಾಡಿ ಸುಸ್ತಾಗಿದ್ದೇವೆ. ಯಾರೂ ನಮಗೆ ಸಹಕಾರ ನೀಡಲಿಲ್ಲ. ಜಮೀನು ಕಳೆದುಕೊಂಡರೆ ನಮ್ಮ ಭವಿಷ್ಯವೇನು ಎಂಬ ಚಿಂತೆಯಿಂದ ನಾವೇ ಸ್ವಂತವಾಗಿ ಈ ಯೋಜನೆ ಆರಂಭಿಸಿದ್ದೇವೆ. ಜನಪ್ರತಿನಿಧಿಗಳು ಕೇವಲ ಚುನಾವಣೆ ಸಮಯದಲ್ಲಿ ಬಂದು ರೈತರು ನಮ್ಮ ಬೆನ್ನೆಲುಬು ಎಂದು ಹೇಳುತ್ತಾರೆ, ಆದರೆ ಕಷ್ಟ ಬಂದಾಗ ಕೈ ಹಿಡಿಯುವುದಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡರು.

ಯೋಜನೆಯ ಅಭಿಯಂತರರಾದ ರಾಜೀವ್ ಪಟೇಲ್ ಮಾಹಿತಿ ನೀಡಿ, “ಸದ್ಯಕ್ಕೆ 60 ಎಕರೆ ಕ್ಷೇತ್ರದಲ್ಲಿ ಈ ಯೋಜನೆ ರೂಪಿಸಲಾಗಿದೆ. 7,000 ಮೀಟರ್ ಉದ್ದ ಹಾಗೂ 20 ಅಡಿ ಆಳದ ಚರಂಡಿ ನಿರ್ಮಿಸಲಾಗುತ್ತಿದೆ. ಇದರಲ್ಲಿ 8 ಇಂಚಿನ ಪೈಪ್‌ಗಳನ್ನು ಬಳಸುವ ಕಾಮಗಾರಿಗೆ 30 ಲಕ್ಷ ರೂ. ಹಾಗೂ 65 ಎಕರೆ ಕ್ಷೇತ್ರದಲ್ಲಿ ಅಲ್ಟ್ರಾ ಜಿಯೋರಿಫ ಪೈಪ್‌ಗಳನ್ನು ಬಳಸಲು 60 ಲಕ್ಷ ರೂ. ಸೇರಿದಂತೆ ಒಟ್ಟು ಒಂದು ಕೋಟಿ ರೂ. ವೆಚ್ಚದಲ್ಲಿ ಭೂಮಿ ಸುಧಾರಣೆ ಮಾಡಲಾಗುತ್ತಿದೆ” ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಜು ಸುಣದೋಳಿ, ಪ್ರಶಾಂತ್ ಸುಣದೋಳಿ, ನಂದು ರಾಜು ಪಟೇಲ್, ಸಚಿನ್ ನಿಂಗನೂರೆ, ಸತೀಶ್ ಬಿರಾದಾರ್ ಸೇರಿದಂತೆ ಗ್ರಾಮದ ರೈತ ಕುಟುಂಬದವರು ಉಪಸ್ಥಿತರಿದ್ದರು.

Tags:

error: Content is protected !!