Dharwad

AIMSSನಿಂದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಲಾಡ್‌ರವರಿಗೆ ಮನವಿ, ಮಹಿಳೆಯರು ಮತ್ತು‌ ಮಕ್ಕಳ ಸಮಸ್ಯೆಗಳ‌ ಪರಿಹಾರಕ್ಕೆ ಆಗ್ರಹ.

Share

ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ, ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಗೆ ಎಐಎಂಎಸ್‌ಎಸ್ ನಿಂದ ಇಂದು ಮನವಿ ಸಲ್ಲಿಸಲಾಯಿತು. ಜತೆಗೆ ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಪರಿಗಣನೆಗೆ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮಹಿಳಾ ಮುಖಂಡರಾದ ಗಂಗೂಬಾಯಿ ಕೋಕರೆ ನೇತೃತ್ವದಲ್ಲಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಸಂಘಟನೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ರಾಜ್ಯದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಮಹಿಳೆಯರು-ಮಕ್ಕಳ ಮೇಲಿನ ಅತ್ಯಾಚಾರ, ಗುಂಪು ಅತ್ಯಾಚಾರ, ಕೊಲೆ,ಮರ್ಯಾದಾಗೇಡು ಹತ್ಯೆ,ಆಸಿಡ್ ದಾಳಿ,ಕೌಟುಂಬಿಕ ದೌರ್ಜನ್ಯದಂತಹ ಘಟನೆಗಳು ಜನತೆಯನ್ನು ಆಕ್ರೋಶಭರಿತರನ್ನಾಗಿಸಿವೆ. ಕಣ್ಣು ಬಿಡುವ ಮುನ್ನವೇ ಉಸಿರು ನಿಲ್ಲಿಸಿ ತಿಪ್ಪೆಗೆ ಎಸೆಯುವ ಸ್ತ್ರೀ ಭ್ರೂಣ ಹತ್ಯೆ ಅವ್ಯಾಹತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವುದು ಸಮಸ್ಯೆಯ ಆಳವನ್ನು ತೋರಿಸುತ್ತದೆ. ಇನ್ನು ಅತ್ಯಾಚಾರ ಮತ್ತು ಗುಂಪು ಅತ್ಯಾಚಾರ ಪ್ರಕರಣಗಳು 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025ರ ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ವಿವರಿಸಿದರು.‌

ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲೇ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ. ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ. 2025ರ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ 43,000ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೂ ಆಡಿ ನಲಿಯಬೇಕಿದ್ದ ಎಳೆಯ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳು ಶೇಕಡಾ 26 ರಷ್ಟು ಹೆಚ್ಚಾಗಿವೆ. ಅದರಂತೆ ದಾಖಲಾದ ಅರ್ಧದಷ್ಟು ಪ್ರಕರಣಗಳು ಖುಲಾಸೆಯಾಗುತ್ತಿವೆ. 2022 ರಲ್ಲಿ ದಾಖಲಾದ 3,209 ಪ್ರಕರಣಗಳಲ್ಲಿ 1,562 ಪ್ರಕರಣಗಳು ಖುಲಾಸೆಯಾಗಿವೆ, 1224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ, ಇನ್ನು ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು, ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರಂಥವರು ಭಾಗಿಯಾಗಿರುವುದು ನಾಡಿನ ದುರಂತವೇ ಸರಿ ಆತಂಕ ವ್ಯಕ್ತಪಡಿಸಿದರು.

ಅನ್ಯ ಜಾತಿಯ ಅಥವಾ ಕೋಮಿನ ಹುಡುಗನನ್ನು ಪ್ರೀತಿಸಿದಳು ಎಂಬ ಒಂದೇ ಕಾರಣಕ್ಕಾಗಿ ಹೆತ್ತ ಮಗಳನ್ನೇ ಕೊಲ್ಲುವ ಮರ್ಯಾದಾಗೇಡು ಹತ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಹೀನ ಕೃತ್ಯದ ವಿರುದ್ಧ ಕಾನೂನನ್ನು ಕೂಡಲೇ ಜಾರಿಗೊಳಿಸಬೇಕು. ಜೊತೆಗೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಆಸಿಡ್ ಎರಚುವುದು, ಕೊಲ್ಲುವುದು, ಸೈಬರ್ ಸ್ಟಾಕಿಂಗ್, ಡಿಜಿಟಲ್ ದಾಳಿಗಳು, ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆಯಂತಹ ಸಮಸ್ಯೆಗಳು ಪ್ರತಿಕ್ಷಣ ಎಷ್ಟೋ ಹೆಣ್ಣು ಮಕ್ಕಳ ಜೀವ ತೆಗೆಯುತ್ತಿವೆ. ಈ 21ನೇ ಶತಮಾನದಲ್ಲೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಜ್ಞಾನದ ಬಾಗಿಲು ತೆರೆದಿಲ್ಲ. ಇಂತಹ ಪರಿಸ್ಥಿತಿಯಲ್ಲೂ KPS ಮ್ಯಾಗ್ನೆಟ್ ಯೋಜನೆಯಡಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮ ಅಲ್ಪ ಸ್ವಲ್ಪ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕೊಡಲಿಯೇಟು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಪರಿಹಾರಕ್ಕಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು. ‌

Tags:

error: Content is protected !!