• ಬೆಳಗಾವಿಯ ಕಪಿಲೇಶ್ವರ ಕೆರೆಯಲ್ಲಿ ಪತ್ತೆಯಾದ ಶವ
• ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಖಡೇಬಜಾರ್ ಪೊಲೀಸರು
• ಸಮಾಜ ಸೇವಕರ ನೆರವಿನಿಂದ ಹೊರಬಂದ ಮೃತದೇಹ
• ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರ ಕಸರತ್ತು

ಬೆಳಗಾವಿಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಮಧ್ಯಾಹ್ನ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ನೂತನ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ತೇಲುತ್ತಿರುವುದು ಕಂಡುಬಂದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇಂದು ಮಧ್ಯಾಹ್ನ ಸುಮಾರು 4 ಗಂಟೆಯ ವೇಳೆಗೆ ಕಪಿಲೇಶ್ವರ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಖಡೇಬಜಾರ್ ಪೊಲೀಸರು ಪರಿಶೀಲನೆ ನಡೆಸಿದರು. ಸಮಾಜ ಸೇವಕ ಅವಧೂತ್ ತುಡ್ವೇಕರ್ ಮತ್ತು ಅವರ ತಂಡದ ಸಹಕಾರದೊಂದಿಗೆ ಕೆರೆಯಿಂದ ಶವವನ್ನು ಹೊರತೆಗೆಯಲಾಗಿದ್ದು, ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿ ಯಾರು? ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಮೃತರ ಗುರುತು ಪತ್ತೆ ಹಚ್ಚಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
