
ಸದ್ಗುರು ಹರದೇವ್ ಸಿಂಗ್ ಜೀ ಮಹಾರಾಜ್ ಅವರ ಜನ್ಮದಿನದ ಅಂಗವಾಗಿ ಖಾನಾಪುರದ ಮಲಪ್ರಭಾ ನದಿ ತೀರದಲ್ಲಿ ಇಂದು ಬೃಹತ್ ಸ್ವಚ್ಛತಾ ಅಭಿಯಾನ ಜರುಗಿತು. ‘ಸ್ವಚ್ಛ ಜಲ, ಸ್ವಚ್ಛ ಮನ’ ಎಂಬ ಘೋಷವಾಕ್ಯದೊಂದಿಗೆ ನೂರಾರು ಸೇವಾದಳದ ಸ್ವಯಂಸೇವಕರು ಈ ಪರಿಸರ ಸೇವೆಯಲ್ಲಿ ಪಾಲ್ಗೊಂಡಿದ್ದರು.


ಸದ್ಗುರು ಹರದೇವ್ ಸಿಂಗ್ ಜೀ ಮಹಾರಾಜ್ ಅವರ ಜನ್ಮದಿನೋತ್ಸವದ ಸ್ಮರಣಾರ್ಥವಾಗಿ, ಫೆಬ್ರವರಿ 22 ರವಿವಾರದಂದು ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ‘ಪ್ರಾಜೆಕ್ಟ್ ಅಮೃತ್’ ಅಡಿಯಲ್ಲಿ ಮಲಪ್ರಭಾ ನದಿಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಸಂತ ನಿರಂಕಾರಿ ಮಿಷನ್ನ ನೂರಕ್ಕೂ ಹೆಚ್ಚು ಸೇವಾದಳದ ಪುರುಷ ಮತ್ತು ಮಹಿಳಾ ಸ್ವಯಂಸೇವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ನದಿ ತೀರದಲ್ಲಿದ್ದ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಿದರು. ಈ ಕಾರ್ಯಕ್ರಮಕ್ಕೆ ಖಾನಾಪುರದ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಗರ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.

ದೇಶಾದ್ಯಂತ ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡುತ್ತಿರುವ ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಶನ್, ಈ ದಿನದಂದು ಇಡೀ ಭಾರತದಾದ್ಯಂತ ಸುಮಾರು 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ನದಿ, ಕೆರೆ ಮತ್ತು ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನವನ್ನು ಏಕಕಾಲಕ್ಕೆ ನಡೆಸಿದೆ. ಖಾನಾಪುರದಲ್ಲಿ ನಡೆದ ಈ ಅಭಿಯಾನವು ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು. ನೀರಿನ ಮೂಲಗಳನ್ನು ಪವಿತ್ರವಾಗಿಡುವುದು ಮತ್ತು ಮಾನವನ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳುವುದು ಈ ‘ಪ್ರಾಜೆಕ್ಟ್ ಅಮೃತ್’ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.

