Kagawad

ಶೇಡಬಾಳದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ: 3 ಟನ್ ತೂಕದ ರಥ ಎಳೆದು ಭಕ್ತಿ ಮೆರೆದ ಸಾವಿರಾರು ಭಕ್ತರು

Share

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಖ್ಯಾತಿ ಪಡೆದ ಈ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ 12ನೇ ಶತಮಾನದ ಶೇಡಬಾಳ ಗ್ರಾಮದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವವು ಅತ್ಯಂತ ಭಕ್ತಿಭಾವದಿಂದ ಜರುಗಿತು. ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವದ ಅಂಗವಾಗಿ, ಸದ್ಭಕ್ತರು ಸುಮಾರು 3 ಟನ್ ತೂಕದ ಬೃಹತ್ ರಥವನ್ನು ಕೈಯಿಂದಲೇ ಎಳೆಯುವ ಮೂಲಕ ಅದ್ದೂರಿಯಾಗಿ ಆಚರಿಸಿದರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಜಾತ್ರೆಯನ್ನು ಪ್ರತಿವರ್ಷದಂತೆ ಈ ಬಾರಿಯೂ ಸರ್ವ ಸಮಾಜದ ಭಕ್ತರು ಅತ್ಯಂತ ಸೌಹಾರ್ದತೆಯಿಂದ ಒಂದಾಗಿ ಆಚರಿಸಿದ್ದು ವಿಶೇಷವಾಗಿತ್ತು. ದೇವಾಲಯದ ಅರ್ಚಕ ಗುರವ ಬಂಧುಗಳು ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ರವಿವಾರ ಸಂಜೆ ಅಶ್ವಿನಿ ನಕ್ಷತ್ರದ ಶುಭ ಘಳಿಗೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಅಶೋಕ್ ಪಾಟೀಲ, ಮುಖಂಡರಾದ ವರ್ಧಮಾನ್ ಪಾಟೀಲ, ಅತಿಕ್ರಾಂತ ಪಾಟೀಲ, ಸುನಿಲ್ ಪಾಟೀಲ, ಅಶ್ವಥ ಪಾಟೀಲ ಹಾಗೂ ಡಾ. ಅಶೋಕ್ ಪಾಟೀಲ ಅವರ ನೇತೃತ್ವದಲ್ಲಿ ರಥೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು. ರಥೋತ್ಸವವು ಯಾವುದೇ ಅಡಚಣೆಯಿಲ್ಲದೆ ಸಾಂಗವಾಗಿ ನೆರವೇರಿದ ಹಿನ್ನೆಲೆಯಲ್ಲಿ, ಈ ವರ್ಷ ಗ್ರಾಮದಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ ಎಂದು ಹಿರಿಯರು ಆಶಾಭಾವ ವ್ಯಕ್ತಪಡಿಸಿದರು. ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ ಅವರ ನೇತೃತ್ವದಲ್ಲಿ ಜಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Tags:

error: Content is protected !!