BELAGAVI

ಬೆಳಗಾವಿಯಲ್ಲಿ ಮಿತಿಮೀರಿದ ಬೀದಿನಾಯಿಗಳ ಕಾಟ: ಬಸವ ಕಾಲನಿ ನಿವಾಸಿಗಳ ನೆಮ್ಮದಿ ಭಂಗ, ಪಾಲಿಕೆ ವಿರುದ್ಧ ಕಿಡಿ

Share

ಬೆಳಗಾವಿ ನಗರದಲ್ಲಿ ಬೀದಿನಾಯಿಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದ್ದು, ಬಸವ ಕಾಲನಿಯಲ್ಲಿ ಬೀದಿನಾಯಿಗಳ ಉಪದ್ರವ ಹೆಚ್ಚಾಗಿದ್ದು, ಸ್ಥಳೀಯರು ಮಹಾನಗರ ಪಾಲಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲನಿಯಲ್ಲಿನ ನಿವಾಸಿಗಳ ಪ್ರಕಾರ, ರಾತ್ರಿ ವೇಳೆಯಲ್ಲಿ ಗುಂಪು ಗುಂಪಾಗಿ ಸಂಚರಿಸುವ ನಾಯಿಗಳು ಭೋಂಕಾರ ಹಾಕುತ್ತ ಜನರ ನಿದ್ದೆಗೆಡಿಸುತ್ತಿವೆ. ಅಲ್ಲದೆ, ಶಾಲೆಗೆ ಹೋಗುವ ಮಕ್ಕಳು ಮತ್ತು ಬೆಳಿಗ್ಗೆ ವಾಕಿಂಗ್‌ಗೆ ಹೊರಡುವವರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚಾಗಿವೆ ಎಂದು ಆರೋಪಿಸಿದ್ದಾರೆ. ಬೀದಿನಾಯಿಗಳಿಗೆ ಕೆಲವರು ನಿಯಮಿತವಾಗಿ ಆಹಾರ ಹಾಕುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ. “ಆಹಾರ ಹಾಕಬೇಡಿ” ಎಂದು ಮನವಿ ಮಾಡಿದರೂ, ಕೆಲವರು ಮಾತು ಕೇಳದೇ ಗಲಾಟೆಗೆ ಮುಂದಾಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಬೀದಿನಾಯಿಗಳ ಹಾವಳಿಯಿಂದ ಜನರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ನಾಯಿಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷತೆ ಕಾಪಾಡುವಂತೆ ಒತ್ತಾಯಿಸಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!