ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ವಿಷಯಾಂತರ ಮಾಡುವ ಸಲುವಾಗಿ ಕಾಂಗ್ರೆಸ್ ಷಡ್ಯಂತ್ರದಿಂದ ಶಾಸಕ ಚಂದ್ರು ಲಮಾಣಿ ಮೇಲೆ ಲೋಕಾ ದಾಳಿ ನಡೆದಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮೂರು ವರ್ಷಗಳಿಂದ ಮೂರು ಗುಂಪುಗಳಾಗಿವೆ. ಲಮಾಣಿ ವಿಷಯದಲ್ಲಿ ಕೆಲವೊಂದಿಷ್ಟು ಆಡಿಯೋ ಹೊರ ಬಂದಿವೆ. ಕೆಲವು ದುಡ್ಡು ಕೊಟ್ಟ ಬಗ್ಗೆ ದಾಖಲೆ ಇಲ್ಲ. ಶಾಸಕ ಚಂದ್ರು ಲಮಾಣಿ ಪ್ರಾಮಾಣಿಕ. ಅವರ ಮೇಲೆ ಕೇಸ್ ದಾಖಲಿಸುವ ಸಲುವಾಗಿ ಈ ಕೆಲಸ ಮಾಡಲಾಗಿದೆ. ಇದರ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆ ಗೊತ್ತಾಗುವಂತಾಗಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಕಾಂಗ್ರೆಸ್ ಕೈವಾಡದಿಂದಲೇ ಇದು ನಡೆದಿದೆ ಎಂದರು. ಜತೆಗೆ ಸಿಎಂ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಮೊದಲ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟರು. ಎರಡನೇ ಅವಧಿಯಲ್ಲಿ ಅವರು ವಿಫಲರಾದರು. ಸಿದ್ದರಾಮಯ್ಯ ಅವರನ್ನು ತುಳಿಯುತ್ತಿರುವುದು ಬಿಜೆಪಿ, ಜೆಡಿಎಸ್ ಅಲ್ಲ. ಕಾಂಗ್ರೆಸ್ ಪಕ್ಷವೇ ಅವರನ್ನು ತುಳಿಯುತ್ತಿದೆ. ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ. ನಾಲ್ಕು ಗೋಡೆ ಮಧ್ಯೆ ಇದನ್ನು ಬಗೆಹರಿಸಿ ಒಳ್ಳೆಯ ಆಡಳಿತ ಕೊಡಬೇಕಿತ್ತು ಎಂದರು.
