BELAGAVI

ಬೆಳಗಾವಿಯಲ್ಲಿ ಜಂಬಗಿ ಸೂಪರ್‌ಸ್ಪೆಷಾಲಿಟಿ ಕಣ್ಣಿನ ಸಂಸ್ಥೆ ಲೋಕಾರ್ಪಣೆ: ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಎಐ ರೋಬೋಟಿಕ್ ತಂತ್ರಜ್ಞಾನ ಲಭ್ಯ!

Share

ಬೆಳಗಾವಿಯ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಹೊಸ ಇತಿಹಾಸ ಬರೆಯಲಾಗಿದೆ. ಎಸ್. ಎಸ್. ಜಂಬಗಿ ಸ್ಮರಣಾರ್ಥ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ‘ಜಂಬಗಿ ಸೂಪರ್‌ಸ್ಪೆಷಾಲಿಟಿ ಐ ಇನ್‌ಸ್ಟಿಟ್ಯೂಟ್’ ಇಂದು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು. ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬೆಳಗಾವಿಗೆ ಪರಿಚಯಿಸುವ ಮೂಲಕ ಕಣ್ಣಿನ ಚಿಕಿತ್ಸೆಯಲ್ಲಿ ಈ ಸಂಸ್ಥೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಬೆಳಗಾವಿ ನೆಹರೂ ನಗರದ ಕೊಲ್ಹಾಪುರ ಸರ್ಕಲ್ ಸಮೀಪವಿರುವ ‘ಜಂಬಗಿ ಸೂಪರ್‌ಸ್ಪೆಷಾಲಿಟಿ ಐ ಇನ್‌ಸ್ಟಿಟ್ಯೂಟ್ ಮತ್ತು ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್’ಗೆ ಇಂದು ಚಾಲನೆ ನೀಡಲಾಯಿತು. ಈ ಸಂಸ್ಥೆಯು ಉತ್ತರ ಕರ್ನಾಟಕದ ಜನತೆಗೆ ಕಣ್ಣಿನ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಇತರ ಮಹಾನಗರಗಳಿಗೆ ಅಲೆಯುವ ತೊಂದರೆಯನ್ನು ತಪ್ಪಿಸಲಿದೆ. ವಿಶೇಷವಾಗಿ, ಬೆಂಗಳೂರಿನ ಹೊರಗಡೆ ಕರ್ನಾಟಕದಲ್ಲೇ ಮೊದಲ ಬಾರಿಗೆ ‘Zeiss Mel 90’ ಎಂಬ ವಿಶ್ವದ ಅತೀ ವೇಗದ ಲೇಸರ್ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ, ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ. ಅಮೋಘ್ ಎಲ್. ಜಂಬಗಿ, ಡಾ. ಜಗದೀಶ್ ಬಿ. ಪಾಟೀಲ್, ವಿಟ್ರಿಯೊರೆಟಿನಲ್ ಸರ್ಜನ್ ಡಾ. ಹೇಮಂತ್ ಆರ್., ಗ್ಲುಕೋಮಾ ತಜ್ಞರಾದ ಡಾ. ಸ್ನೇಹಾ ಎ.ಭಾಂದುರ್ಗೆ ಹಾಗೂ ಪೀಡಿಯಾಟ್ರಿಕ್ ನೇತ್ರತಜ್ಞರಾದ ಡಾ. ಮಿತಾಲಿ ಶಾಹ ಇನ್ನುಳಿದವರ ಉಪಸ್ಥಿತಿಯಲ್ಲಿ ನೂತನ ‘ಜಂಬಗಿ ಸೂಪರ್‌ಸ್ಪೆಷಾಲಿಟಿ ಐ ಇನ್‌ಸ್ಟಿಟ್ಯೂಟ್’’ಗೆ ಚಾಲನೆಯನ್ನು ನೀಡಲಾಯಿತು.

ಈ ವೇಳೆ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು, ಬೆಳಗಾವಿಯಲ್ಲಿ ಆರಂಭಗೊಂಡ ಆಸ್ಪತ್ರೆಯನ್ನು ಒಂದು ಐತಿಹಾಸಿಕ ಎನ್ನಬಹುದು. ಇವರ ಹಾರೂಗೇರಿ ಆಸ್ಪತ್ರೆಯನ್ನು ಕೂಡ ನಾನೇ ಉದ್ಘಾಟಿಸಿದ್ದೇ, ಈಗ ಬೆಳಗಾವಿಯ ಆಸ್ಪತ್ರೆಯನ್ನು ಉದ್ಘಾಟಿಸುವ ಸೌಭಾಗ್ಯ ದೊರೆತಿದೆ. 30 ವರ್ಷದ ಹಿಂದಿನ ಬೆಳಗಾವಿಯ ಆಸ್ಪತ್ರೆಗಳ ಇತಿಹಾಸವನ್ನು ತಿಳಿಸಿದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಯನ್ನು ಆರೋಗ್ಯ ಕ್ಷೇತ್ರದಲ್ಲಿ ಹೆಸರುವಾಸಿ ಮಾಡುವುದು ಕೆ.ಎಲ್.ಇ ಸಂಸ್ಥೆಯ ಗುರಿ ಎಂದು ಹೇಳಿದ್ದೆ. ಮುಂಬೈ, ಬೆಂಗಳೂರು ಬಿಟ್ಟರೇ ಇಂತಹ ಪೂರಕವಾದ ಉಪಕರಣಗಳಿರುವ ಆಸ್ಪತ್ರೆಗಳಿರಲಿಲ್ಲ. ಈಗ ಬೆಳಗಾವಿಗರಿಗೆ ಎಲ್ಲಿಯೂ ಹೋಗುವ ಅವಶ್ಯಕತೆಯಿಲ್ಲ. ಜಂಬಗಿ ಆಸ್ಪತ್ರೆಯಲ್ಲಿಯೇ ಎಲ್ಲ ಸೌಲಭ್ಯಗಳನ್ನು ನೀಡಿದ್ದಾರೆ ಎಂದರು. ಇದು ಆಸ್ಪತ್ರೆಯಲ್ಲದೇ ಫೈವ್ ಸ್ಟಾರ್ ಹೊಟೇಲ್ ಎನಿಸುತ್ತಿದೆ. ಅಷ್ಟು ಸುಂದರ ಸ್ವಚ್ಛವಾಗಿದೆ. ಲಕ್ಷ್ಮಣ ಜಂಬಗಿ ಅವರ ಶ್ರಮದಿಂದಲೇ ಹಾರೂಗೇರಿ ಆಸ್ಪತ್ರೆ ಜನಮನ್ನಣೆಗೆ ಪಾತ್ರವಾಗಿದೆ. ನುರಿತ ತಜ್ಞ ವೈದ್ಯರು ಇಲ್ಲಿದ್ದು, ಇದು ಯಶಸ್ವಿಯಾಗಿ ನಡೆಯಲಿದೆ ಎಂದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಎಲ್ಲ ದೃಷ್ಠಿಯಲ್ಲಿ ವೇಗವಾಗಿ ನಡೆಯುತ್ತಿರುವ ನಗರವಾಗಿದೆ. 40 ವರ್ಷದ ಹಿಂದಿದ್ದ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಿದ್ದು, ವಿಶ್ವಾಸಾರ್ಹ ಆಸ್ಪತ್ರೆಗಳು ಇಲ್ಲಿವೆ. ಭವ್ಯವಾದ ಆಸ್ಪತ್ರೆಯನ್ನು ನಿರ್ಮಿಸಿರುವ ಜಂಬಗಿ ಅವರ ಕಾರ್ಯವನ್ನು ಶ್ಲಾಘಿಸಿದರು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿದೇಶಿ ಉಪಕರಣಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿರುವುದು ಸಂತಸ ವಿಷಯ. ಬೆಳಗಾವಿ ಸೇರಿದಂತೆ ಇನ್ನುಳಿದ ರಾಜ್ಯದ ರೋಗಿಗಳು ಇದರ ಸದುಪಯೋಗ ಪಡೆಯಲಿ ಎಂದು ಶುಭ ಹಾರೈಸಿದರು.

ಈ ಸಂಸ್ಥೆಯು ಹೈದರಾಬಾದ್‌ನ ಸುಪ್ರಸಿದ್ಧ ಎಲ್.ವಿ. ಪ್ರಸಾದ್ ಕಣ್ಣಿನ ಸಂಸ್ಥೆಯ ಸಹಯೋಗವನ್ನು ಹೊಂದಿರುವುದು ವಿಶೇಷ. ಇಲ್ಲಿ ರೋಬೋಟಿಕ್ ಕ್ಯಾಟರಾಕ್ಟ್ ಸರ್ಜರಿ (Alcon Unity 4D), ಗ್ಲಾಸಸ್ ರಿಮೂವಲ್‌ಗಾಗಿ ಅತ್ಯಾಧುನಿಕ ಲೇಸಿಕ್ ಮತ್ತು ಸ್ಮೈಲ್ ಚಿಕಿತ್ಸೆ, ರೆಟಿನಾ ಸರ್ಜರಿ ಹಾಗೂ ಕಾರ್ನಿಯಾ ಸೇವೆಗಳು ಲಭ್ಯವಿವೆ. ಈ ಸಂದರ್ಭದಲ್ಲಿ ಡಾ. ಲಕ್ಷ್ಮಣ್ ಎಸ್. ಜಂಬಗಿ, ಡಾ. ವರ್ಷಾ ಎಲ್. ಜಂಬಗಿ, ಡಾ. ಪ್ರೇರಣಾ ಎ. ಜಂಬಗಿ ಸೇರಿದಂತೆ ಜಂಬಗಿ ಮತ್ತು ಹೊಸಾಳೆ ಕುಟುಂಬದವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!