ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಮದ್ಯದ ಹಾವಳಿಗೆ ಅಬಕಾರಿ ಇಲಾಖೆ ಬ್ರೇಕ್ ಹಾಕಿದೆ. ಗಡಿ ಭಾಗದಿಂದ ಸಾಗಣೆಯಾಗುತ್ತಿದ್ದ ಗೋವಾ ಮದ್ಯದ ಮೇಲೆ ಅಧಿಕಾರಿಗಳ ತಂಡ ಮಿಂಚಿನ ದಾಳಿ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹಿರಿಯ ಅಬಕಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಬಕಾರಿ ಉಪ ವಿಭಾಗದ ತಂಡವು ಇಂದು ಮುಂಜಾನೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ದಿನಾಂಕ 22-02-2026 ರಂದು ಬೆಳಗಾವಿ ತಾಲೂಕಿನ ಬಹದ್ದೂರವಾಡಿ ಗ್ರಾಮದಿಂದ ರಣಕುಂಡೆ ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಮಾರುತಿ 800 ಕಾರನ್ನು ಅಧಿಕಾರಿಗಳು ತಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಸುಮಾರು 205.04 ಲೀಟರ್ ಗೋವಾ ಮದ್ಯ ಹಾಗೂ 25 ಲೀಟರ್ ಓರಾಕ್ ಸಾರಾಯಿಯನ್ನು ಪತ್ತೆ ಹಚ್ಚಿ ಜಪ್ತುಪಡಿಸಿಕೊಳ್ಳಲಾಗಿದೆ. ಜಪ್ತು ಮಾಡಲಾದ ಮದ್ಯ ಹಾಗೂ ಕಾರಿನ ಒಟ್ಟು ಮೌಲ್ಯ ಸುಮಾರು 3,12,638 ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಅಬಕಾರಿ ನಿರೀಕ್ಷಕರಾದ ಮಂಜುನಾಥ ಮೆಳ್ಳಿಗೇರಿ ಮತ್ತು ಉಪ ನಿರೀಕ್ಷಕ ಸುನೀಲ ಪಾಟೀಲ ನೇತೃತ್ವದ ತಂಡವು ಈ ದಾಳಿ ನಡೆಸಿದ್ದು, ತಂಡದಲ್ಲಿ ಪೇದೆ ವೈ.ಬಿ. ಪಾಟೀಲ ಹಾಗೂ ಗೃಹ ರಕ್ಷಕ ಭರತ ಪಠಾತ ಭಾಗವಹಿಸಿದ್ದರು. ಅಧಿಕಾರಿಗಳ ತಂಡವು ದಾಳಿ ನಡೆಸುತ್ತಿದ್ದಂತೆಯೇ ವಾಹನ ಬಿಟ್ಟು ಆರೋಪಿತನು ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಜಾಲ ಬೀಸಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣಿಕೆ ತಡೆಗಟ್ಟಲು ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ.
