BELAGAVI

ರಾಯಣ್ಣನ ಮೂರ್ತಿಯ ಮೇಲಿದ್ದದ್ದು ಮಸಿಯಲ್ಲ, ಮರದ ಅಂಟು! ಬೆಳಗಾವಿ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲು

Share

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆಂಬ ಸುದ್ದಿ ಬೆಳಗಾವಿಯಲ್ಲಿ ಸಂಚಲನ ಮೂಡಿಸಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಅಚ್ಚರಿಯ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಸೈಂಟಿಫಿಕ್ ವರದಿಯ ಪ್ರಕಾರ ಅದು ಮಸಿಯಲ್ಲ ಎಂಬುದು ಇದೀಗ ದೃಢಪಟ್ಟಿದೆ.

ಬೆಳಗಾವಿ ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ಕಂಡುಬಂದ ಕಪ್ಪು ಕಲೆಯ ಕುರಿತು ಉಂಟಾಗಿದ್ದ ಆತಂಕಕ್ಕೆ ಈಗ ತೆರೆ ಬಿದ್ದಿದೆ. ಫೆಬ್ರವರಿ 19 ರಂದು ಮೂರ್ತಿಯ ಮೇಲೆ ಕಪ್ಪು ಪದಾರ್ಥ ಎರಚಲಾಗಿದೆ ಎಂಬ ದೂರಿನ ಮೇರೆಗೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಫೆಬ್ರವರಿ 18 ರ ಸಂಜೆಯಿಂದ 19 ರ ಬೆಳಿಗ್ಗೆಯವರೆಗೆ ಯಾವುದೇ ವ್ಯಕ್ತಿ ಮೂರ್ತಿಯ ಹತ್ತಿರ ಬಂದು ದ್ರವ ಎರಚಿದ ಕುರುಹುಗಳು ಪತ್ತೆಯಾಗಿರಲಿಲ್ಲ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್‌ಎಸ್‌ಎಲ್ ತಂಡದಿಂದ ಪರೀಕ್ಷೆ ನಡೆಸಿದ್ದರು. ಮೂರ್ತಿ, ರಸ್ತೆ ಹಾಗೂ ಮೂರ್ತಿಯ ಮೇಲಿರುವ ಮರದ ಎಲೆಗಳಿಂದ ಸಂಗ್ರಹಿಸಿದ ಮಾದರಿಗಳ ವರದಿ ಈಗ ಬಂದಿದ್ದು, ಅದರಲ್ಲಿ ಆ ಕಪ್ಪು ಕಲೆಯು ಮರದ ಅಂಟು (Plant Resin) ಎಂದು ದೃಢಪಟ್ಟಿದೆ. ಮರದಿಂದ ಸಹಜವಾಗಿ ಬಿದ್ದ ಅಂಟು ದ್ರಾವಣವು ಕಪ್ಪು ಕಲೆಯಂತೆ ಕಂಡಿತ್ತೇ ಹೊರತು, ಇದು ಯಾವುದೇ ಕಿಡಿಗೇಡಿಗಳ ಕೃತ್ಯವಲ್ಲ ಎಂದು ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಲಾಗಿದೆ.

Tags:

error: Content is protected !!