ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರ ಬಂಧನ ಈಗ ಹೊಸ ಸಂಚಲನ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಮುಗ್ಧ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಗುಡುಗಿದ್ದಾರೆ.
ಬಾಗಲಕೋಟೆ ಶಿವಜಯಂತಿ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್, ಇಲಾಖೆಯ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಸಮಯದಲ್ಲಿ ಮಾಂಸ ಸಾಗಿಸುತ್ತಿದ್ದ ಲಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಆದರೆ, ಇದು ಹಿಂದೂ ಕಾರ್ಯಕರ್ತರ ಕೆಲಸವಲ್ಲ, ಬದಲಾಗಿ ವಿಮಾ ಪರಿಹಾರ ಪಡೆಯುವ ಉದ್ದೇಶದಿಂದ ಮುಸ್ಲಿಂ ಸಮುದಾಯದವರೇ ತಮ್ಮ ವಾಹನಕ್ಕೆ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಮುತಾಲಿಕ್ ಗಂಭೀರವಾಗಿ ಆರೋಪಿಸಿದರು.

ತನಿಖೆಗೆ ಹಿಂದೂ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡುತ್ತಿದ್ದರೂ ಸಹ, ಪೊಲೀಸರು ಬೇಕಂತಲೇ ಅವರನ್ನು ಬಂಧಿಸುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಓಲೈಕೆಗಾಗಿ ಅಮಾಯಕರನ್ನು ಜೈಲಿಗಟ್ಟಲಾಗುತ್ತಿದೆ. ಒಂದು ವೇಳೆ ವಿನಾಕಾರಣ ಬಂಧನ ಮುಂದುವರಿದಲ್ಲಿ ಇಡೀ ಜಿಲ್ಲೆಯಾದ್ಯಂತ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುತಾಲಿಕ್ ಇದೇ ವೇಳೆ ಎಚ್ಚರಿಕೆ ನೀಡಿದರು.
