ಬೇಸಿಗೆ ಅವಧಿ ಆರಂಭ ಆಗುತ್ತಿರುವುದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಹೆಸ್ಕಾಂ ಸಂಸ್ಥೆಯವರು ಕ್ರಮವಹಿಸಬೇಕು. ಸರ್ಕಾರದ ನಿಯಮದಂತೆ ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ, ರೈತರಿಗೆ ಅನುಕೂಲವಾಗುವಂತೆ ನೋಡಬೇಕು. ಆದಷ್ಟು ಹಗಲು ಹೊತ್ತಿನಲ್ಲಿ ಅಥವಾ ಸಂಜೆ ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಸ್ಕಾಂ ಸಂಸ್ಥೆಯ ವಿವಿಧ ಕಾಮಗಾರಿಗಳ ಪ್ರಗತಿ ಹಾಗೂ ಬೇಸಿಗೆ ಅವಧಿಯ ವಿದ್ಯುತ್ ಪೂರೈಕೆ ಸಿದ್ದತೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಜರುಗುಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 67 ಕೃಷಿ ವಿದ್ಯುತ್ ಫೀಡರ್‌ಗಳಿವೆ. ಇದರಲ್ಲಿ 41 ಫೀಡರ್‌ಗಳಿಂದ ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯೊಳಗೆ, 12 ಫೀಡರ್‌ಗಳಿಗೆ ಸಂಜೆ 6 ರಿಂದ ರಾತ್ರಿ 9 ಗಂಟೆ ಹಾಗೂ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯೊಳಗೆ ಮತ್ತು 8 ಫೀಡರ್‌ಗಳಿಂದ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಮತ್ತು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಹೀಗೆ ನಿಗದಿತ ಫೀಡರ್‌ಗಳಿಂದ ವಿವಿಧ ಅವಧಿಯಲ್ಲಿ ಒಟ್ಟು 7 ತಾಸು ಕೃಷಿ ಚಟುವಟಿಕೆಗಳಿಗಾಗಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.
ಹಿಂಗಾರು ಗೋಧಿ, ಭತ್ತ, ಕಬ್ಬು ಬೆಳೆಗಳಿಗೆ ನೀರಿನ ಅಗತ್ಯವಿದ್ದು, ರೈತರು ನೀರಾವರಿಗಾಗಿ ಕೊಳವೆ ಬಾವಿಗಳಿಗೆ ಹೆಚ್ಚು ಅವಲಂಬನೆ ಆಗಿದ್ದಾರೆ. ಕಲಘಟಗಿ, ಅಳ್ನಾವರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ, ತಡರಾತ್ರಿ ವಿದ್ಯುತ್ ನೀಡುವುದರಿಂದ ನೀರು ಹಾಯಿಸಲು ತೊಂದರೆ ಆಗುತ್ತಿದೆ ಎಂದು ರೈತರು ಕರೆ ಮಾಡಿ, ಸಮಸ್ಯೆ ಹೇಳುತ್ತಿದ್ದಾರೆ ಎಂದರು.
ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಶಿಫ್ಟ್ ಆಧಾರದಲ್ಲಿ ಮಾಡಿದರೂ ಪರವಾಗಿಲ್ಲ, ಆದರೆ ತೀರಾ ಮಧ್ಯರಾತ್ರಿ ವಿದ್ಯುತ್ ಪೂರೈಸಿದರೆ, ರಾತ್ರಿ ಹೊತ್ತಲ್ಲಿ ರೈತರಿಗೆ ತೊಂದರೆ ಆಗುತ್ತದೆ. ಇದನ್ನು ಪರಿಶೀಲಿಸಿ ಕ್ರಮವಹಿಸಬೇಕು ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಅತೀ ಹೆಚ್ಚು ಸಮಸ್ಯೆ ಉಂಟಾಗುತ್ತಿರುವ ತಬಕದಹೊನ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರ ಉನ್ನತಿಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿಗಳು, ಹೆಸ್ಕಾಂ ಅಧಿಕಾರಿ, ಎಂಜಿನಿಯರಗಳೊಂದಿಗೆ ತಬಕದಹೊನ್ನಳ್ಳಿ ವಿದ್ಯುತ್ ಸ್ಟೇಶನ್ ಭೇಟಿ ನೀಡಿ, ಕಾಮಗಾರಿ ಪ್ರಗತಿ ಪರಿಶೀಲಿಸಲು ಸಚಿವರು ಸೂಚಿಸಿದರು.
ನಿಗದಿ ಮತ್ತು ಅರಳಿಕಟ್ಟಿ ಕ್ರಾಸ್, ಬಮ್ಮಿಗಟ್ಟಿ ಸೇರಿ ಮೂರು ಗ್ರಾಮಗಳಿಗೆ ಹೊಸದಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರಕಾರದಿಂದ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಟೆಂಡರ್, ಗುತ್ತಿಗೆದಾರ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ ಎಂದು ಹೇಳಿದ ಸಚಿವರು ಕೆಪಿಟಿಸಿಎಲ್ ನೂತನ ವ್ಯವಸ್ಥಾಪಕ ನಿರ್ದೇಶಕರಾದ ಹಿರಿಯ ಐಎಎಸ್ ಅಧಿಕಾರಿ ವ್ಹಿ. ರಾಮ್ ಪ್ರಸಾತ್ ಮನೋಹರ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣ ಸಮಸ್ಯೆ ಬಗೆಹರಿಸಲು ಸೂಚಿಸಿದರು.
