Bagalkot

ಬಾಗಲಕೋಟೆ ಕಲ್ಲು ತೂರಾಟ: ಗಾಯಾಳು ಕಾರ್ಯಕರ್ತನಿಗೆ ಬಿವೈ ವಿಜಯೇಂದ್ರ ಫೋನ್ ಕರೆ; ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ!

Share

ಬಾಗಲಕೋಟೆಯಲ್ಲಿ ಇತ್ತೀಚೆಗೆ ನಡೆದ ಕಲ್ಲು ತೂರಾಟದ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ಅವರ ಆರೋಗ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಚಾರಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ್ ಅವರ ಫೋನ್‌ಗೆ ಕರೆ ಮಾಡಿದ ವಿಜಯೇಂದ್ರ ಅವರು, ನೇರವಾಗಿ ಪ್ರಕಾಶ್ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.

“ಪ್ರಕಾಶ್ ಹೇಗಿದಿಯಪ್ಪಾ? ಘಟನೆಯ ಬಗ್ಗೆ ತಿಳಿಯಿತು, ಈಗ ಆರೋಗ್ಯ ಹೇಗಿದೆ?” ಎಂದು ಅತ್ಯಂತ ಆಪ್ತವಾಗಿ ವಿಚಾರಿಸಿದರು. ಈ ವೇಳೆ ಉತ್ತರಿಸಿದ ಪ್ರಕಾಶ್, “ಈಗ ಸ್ವಲ್ಪ ಸುಧಾರಿಸಿದೆ, ಆದರೆ ಇನ್ನು ಸ್ವಲ್ಪ ನೋವಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾರ್ಯಕರ್ತನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ವಿಜಯೇಂದ್ರ ಅವರು, ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಲ್ಲದೆ, ಪಕ್ಷವು ಕಾರ್ಯಕರ್ತರ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ ಎಂಬ ಸಂದೇಶ ರವಾನಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಶಾಂತಿ ಸಭೆಗಳು ವಿಫಲವಾಗಿ, ನಿಷೇಧಾಜ್ಞೆ ಮುಂದುವರಿಯುತ್ತಿರುವ ಈ ಸಂಕಷ್ಟದ ಸಮಯದಲ್ಲಿ, ಸ್ವತಃ ರಾಜ್ಯಾಧ್ಯಕ್ಷರೇ ಕರೆ ಮಾಡಿ ಮಾತನಾಡಿರುವುದು ಸ್ಥಳೀಯ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಗಲಭೆಯಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳುವ ಮೂಲಕ ಬಿಜೆಪಿ ತನ್ನ ಕಾರ್ಯಕರ್ತರ ಬೆನ್ನಿಗೆ ನಿಂತಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Tags:

error: Content is protected !!