BELAGAVI

ತ್ರಿಪದಿ ಕವಿ ಸರ್ವಜ್ಞ ಜಯಂತಿ ಉತ್ಸವ-೨೦೨೬

Share

ಬೆಳಗಾವಿ, ಫೆ.೨೦ (ಕರ್ನಾಟಕ ವಾರ್ತೆ): ಸರ್ವಜ್ಞ ೧೬ನೇ ಶತಮಾನದ ಕವಿ. ಕ್ಷಣಮಾತ್ರದಲ್ಲಿ ಕವಿತೆ ರಚಿಸುವ ಕವಿ ಸರ್ವಜ್ಞ ಸುಮಾರು ಎರಡು ಸಾವಿರ ತ್ರಿಪದಿಗಳನ್ನ ರಚನೆ ಮಾಡಿದ್ದಾರೆ. ಜಾತಿ, ಕುಲ ಎಂಬ ಸಾಮಾಜಿಕ ಶೋಷಣೆಯನ್ನು ತ್ರಿಪದಿಗಳ ಮೂಲಕ ಹೋಗಲಾಡಿಸುವ ಸಾಹಿತ್ಯವನ್ನು ಬರೆದ ಮಹಾನ್ ಕವಿ ಸರ್ವಜ್ಞ ಎಂದು ಹಿರಿಯ ಸಾಹಿತಿ ವಾಯ್.ಎಂ. ಭಜಂತ್ರಿ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಫೆ.೨೦) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಉತ್ಸವ-೨೦೨೬ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆಯ ಮಾಸೂರು ಗ್ರಾಮದ ಜನಿಸಿದ ಸರ್ವಜ್ಞ ಪುಷ್ಪದತ್ತ ಎಂಬ ಹೆಸರು ಮೊದಲು ಹೊಂದಿದ್ದರು. ಬಹಳ ಚತುರ ಹಾಗೂ ಬುದ್ಧಿವಂತನಾದ ಇವರು ಊರೂರು ಸಂಚಾರ ಮಾಡಿ ಎಲ್ಲರಿಂದ ವಿವಿಧ ವಿಷಯಗಳ ಸಂಗ್ರಹ ಮಾಡುತ್ತ ಕವಿ ಸರ್ವಜ್ಞನಾದರು ಎಂದು ಹೇಳಿದರು.
ತ್ರಿಪದಿಗೆ ದೊಡ್ಡ ಕೊಡುಗೆ ನೀಡಿ ಎಲ್ಲವನ್ನು ತಿಳಿದವನೆ ಸರ್ವಜ್ಞ ಎಂದು ಹೇಳಿದವರು. ಪ್ರತಿಯೊಬ್ಬರಿಂದಲೂ ಒಂದೊAದು ಅಂಶ ಸಂಗ್ರಹಿಸಿ ವಿದ್ಯೆಯ ಶಿಖರವಾದ ಸರ್ವಜ್ಞ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ಸಾಮಾಜಿಕ ಸಂಸ್ಕಾರ, ನೈತಿಕ ಮೌಲ್ಯ ಬೆಳೆಸುವುದು ಸರ್ವಜ್ಞ ಜಯಂತಿ ಮೂಲ ಉದ್ದೇಶವಾಗಿದೆ.

ಸರ್ವಜ್ಞರು ಸಾಮಾಜಿಕ ಸಂಶೋಧಕ ಸಮಾಜದ ಸ್ಥಿತಿ-ಗತಿ ನಿಜ ಸಂಗತಿಯನ್ನು ಕಣ್ಣಾರೆ ಕಂಡು ತ್ರಿಪದಿಗಳನ್ನು ಬರೆದರು. ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ಸರ್ವಜ್ಞ ಪುರುಷ ಮಹಿಳೆ ಎಲ್ಲರೂ ಒಂದೇ ಎಡ-ಬಲ ಮೇಲು ಕೀಳು ಎಂಬುವುದು ಇಲ್ಲ ಎಂದು ತಮ್ಮ ಸೈದ್ಧಾಂತಿಕ ಸಂದೇಶವನ್ನು ಸಮಾಜಕ್ಕೆ ಸಾರಿದವರು.

ಸರ್ವಜ್ಞ ಯಾವಾಗಲೂ ವಾಸ್ತವದಲ್ಲಿ ಮಾತನಾಡುವ ವ್ಯಕ್ತಿ ಬದುಕು ಸುಂದರವಾಗಿಸಲು ಧಾನ, ಧರ್ಮ ಮಾಡಬೇಕು ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ನಾವು ಮಾನವೀಯ ಮೌಲ್ಯಗಳಿಂದ ಬಾಳಿದರೆ ಬದುಕೇ ಸ್ವರ್ಗ, ಕೈಲಾಸವಾಗುವುದು.
“ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದ ಪರರಿಗೆ” ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದೆ ಕಟ್ಟಿಟ್ಟ ಬುತ್ತಿ ಸರ್ವಜ್ಞ ಅದರಿಂದ ನಾವು ನೀವು ಎಲ್ಲರೂ ಧಾನ, ಧರ್ಮದಲ್ಲಿ ತೊಡಗಿಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡೋಣ ನಿಸ್ವಾರ್ಥದಿಂದ ಬದುಕೋಣ.
ಸಾಲ ಮಾಡುವಾಗ ಇರುವ ಪ್ರೀತಿ, ವಿಶ್ವಾಸ ಮರಳಿ ಕೊಡುವಾಗ ಇರುವುದಿಲ್ಲ ತೆಗೆದುಕೊಂಡಿದ್ದನ್ನು ನಾವು ಮರಳಿ ಕೊಡುವುದು ನಿಜವಾದ ಮಾನವ ಧರ್ಮ. ನಾವು ಮಾಡುವ ಸಂಘ ನಡವಳಿಕೆಯಿಂದ ನಮ್ಮ ಜೀವನ ನಿರ್ಮಾಣವಾಗುತ್ತದೆ. ಆದ್ದರಿಂದ ಸರ್ವಜ್ಞ ಹೇಳುತ್ತಾರೆ “ಸಜ್ಜನರ ಸಂಘ ಸವಿಜೇನು ಸವಿದಂತೆ” ಎಂದು ಹಿರಿಯ ಸಾಹಿತಿಗಳು ವಾಯ್.ಎಂ. ಭಜಂತ್ರಿ ಅವರು ಉಪನ್ಯಾಸದಲ್ಲಿ ತಿಳಿಸಿದರು.

ಸರ್ವಜ್ಞರ ತ್ರಿಪದಿಗಳನ್ನು ಓದಿ ಅರ್ಥ ಮಾಡಿಕೊಂಡರೆ ಒಳ್ಳೆಯ ಸಮಾಜ ಕಟ್ಟಲು ಸಾಧ್ಯ. ಮಕ್ಕಳು ಯಾವುದೇ ಸಮಾಜದಲ್ಲಿ ಜನಿಸಿದರು ಕೂಡ ಎಲ್ಲಾ ಮಕ್ಕಳಿಗೆ ಪಾಲಕರು ಸರ್ವಜ್ಞರ ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಶಿಕ್ಷಣವನ್ನು ನೀಡಬೇಕು. ಯುವ ಪೀಳಿಗೆ ನಮ್ಮ ಸುತ್ತ ಮುತ್ತಲಿನ ವಿವಿಧ ರೀತಿಯ ಅವಕಾಶಗಳನ್ನು ಸರಿಯಾಗಿ ಪಡೆದುಕೊಳ್ಳಲು ಕೂಡ ಶಿಕ್ಷಣದ ಅವಶ್ಯಕತೆ ಇದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಎಂ. ಕಾರ್ತಿಕ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಆಯ್. ಎಸ್ ಕುಂಬಾರ, ಸುರೇಶ್ ವೈದ್ಯ ಹಾಗೂ ಕುಂಬಾರ ಸಮಾಜದ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:

error: Content is protected !!