Kagawad

ಮಂಗಸೂಳಿ ಮಲ್ಲಯ್ಯ ಮಂದಿರದಲ್ಲಿ ಅರುಣ್ ಯೋಗಿರಾಜ್ ಕೆತ್ತನೆಯ ವಿಷ್ಣು ವಿಗ್ರಹ ಪ್ರಾಣ ಪ್ರತಿಷ್ಠಾಪನೆ

Share

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಸುಕ್ಷೇತ್ರ ಶ್ರೀ ಮಲ್ಲಯ್ಯ ದೇವಸ್ಥಾನದಲ್ಲಿ, ಹೆಗಡಿ ಪ್ರಧಾನ ವಿಷ್ಣು ಅವತಾರ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನೆರವೇರಿತು.
ಶುಕ್ರವಾರದಂದು ಮಂಗಸೂಳಿ ಗ್ರಾಮದ ಶ್ರೀ ಮಲ್ಲಯ್ಯ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಹಾಗೂ ಸುಮಂಗಲೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು. “ಒಂದು ಗುಡಿ ಏಳುಕೋಟ ಏಳುಕೋಟ
ಜೈ ಮಲ್ಹಾರ
” ಎಂಬ ಜಯಘೋಷದೊಂದಿಗೆ ಮಂದಿರದಲ್ಲಿ ಭಕ್ತಿಯಿಂದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು.
ಸುಮಾರು 1400 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಈ ಮಂದಿರವು ಚಾಲುಕ್ಯರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿತ್ತು. ಈ ಮಂದಿರದಲ್ಲಿ ಈ ಹಿಂದೆ ಪ್ರತಿಷ್ಠಾಪಿಸಲಾಗಿದ್ದ ಹೆಗಡಿ ಪ್ರಧಾನ ವಿಷ್ಣು ಅವತಾರ ಮೂರ್ತಿಯು ಭಿನ್ನವಾಗಿದ್ದರಿಂದ (ಭಂಗವಾಗಿದ್ದರಿಂದ), ಇದೀಗ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂದಿರದಲ್ಲಿ ಸ್ಥಾಪಿಸಲಾದ ಈ ನೂತನ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದ ಬಾಲರಾಮನ ಮೂರ್ತಿಯನ್ನು ಕೆತ್ತಿದ ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿದ್ದಾರೆ. ಸುಮಾರು 500 ಕೆಜಿ ತೂಕದ ಕೃಷ್ಣ ಶಿಲೆಯ ಹೆಚ್.ಡಿ. ಕೋಟೆ ಪಾಷಾಣದಲ್ಲಿ ಈ ಸುಂದರ ಮೂರ್ತಿಯನ್ನು ನಿರ್ಮಿಸಲಾಗಿದ್ದು, ವಿವಿಧ ಹೋಮ-ಹವನಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಸುಕ್ಷೇತ್ರ ನರಸಿಂಹವಾಡಿಯ ಪ್ರತಿಷ್ಠಾಚಾರ್ಯರಾದ ದತ್ತಾತ್ರೇಯ ಅಲಾಸ್ಕರ್ ಅವರ ನೇತೃತ್ವದಲ್ಲಿ, ಸತತ 10 ಗಂಟೆಗಳ ಕಾಲ ಶಾಸ್ತ್ರೋಕ್ತ ಮಂತ್ರೋಪಚಾರಗಳೊಂದಿಗೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಗಸೂಳಿ ಗ್ರಾಮದ ಹಿರಿಯರಾದ ಗುಂಡಾಶಾಸ್ತ್ರಿ ದೇಶಿಂಕರ್ ಅವರು ಮಂತ್ರ ಪಠಣ ಮಾಡಿದರು. ಮಂದಿರದ ಟ್ರಸ್ಟಿಗಳಾದ ಉಜ್ವಲ್ ಸಿಂಗ್ ಪವಾರ್ ದೇಸಾಯಿ, ವಿಕ್ರಾಂತ್ ಪವಾರ್ ದೇಸಾಯಿ ಹಾಗೂ ಮಯೂರ್ ಪವಾರ್ ದೇಸಾಯಿ ಅವರ ಮುಖ್ಯ ಉಪಸ್ಥಿತಿಯಲ್ಲಿ ಈ ಸಮಾರಂಭ ಜರುಗಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಮಂದಿರದ ಬಾರಾ ಬಲುತಿದಾರರಾದ ದೇಸಾಯಿ, ಪೂಜಾರಿ, ದೇಶಪಾಂಡೆ, ಕುಲಕರ್ಣಿ, ಪಾಟೀಲ್, ಪಟ್ಟಣಶೆಟ್ಟಿ, ಶೆಟ್ಟಿ, ಮಾಲದಾರ್, ಭಾಲದಾರ್, ಛಡಿದಾರ್, ಚೋಪದಾರ್, ಶಾಸನ ಕಾಟಿ ಮಾನ್ಕರಿ ಹಾಗೂ ವಾರಸುದಾರರಾದ ವಾಘೆ ಮುರುಳಿ ಮನೆತನದವರು ಭಕ್ತಿಯಿಂದ ಪಾಲ್ಗೊಂಡಿದ್ದರು.

ಪೂಜಾರಿ ಕುಟುಂಬದ ಮುಖ್ಯಸ್ಥರಾದ ರವೀಂದ್ರ ಪೂಜಾರಿ ಅವರು ಮಾತನಾಡಿ, “ಹೆಗಡಿ ಪ್ರಧಾನ ವಿಷ್ಣು ಅವತಾರ ಮೂರ್ತಿಯು ಭಿನ್ನವಾಗಿದ್ದರಿಂದ ಅದನ್ನು ಪುನಃ ಸ್ಥಾಪಿಸಲು ಎಲ್ಲ ಪೂಜಾರಿ ಮನೆತನದ ಪ್ರಮುಖರು ಹಾಗೂ ಭಕ್ತಾದಿಗಳು ನಿರ್ಧರಿಸಿದ್ದೆವು. ಅಯೋಧ್ಯೆಯ ಶ್ರೀರಾಮನ ಮೂರ್ತಿಯನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಂದ 500 ಕೆಜಿ ತೂಕದ ಕೃಷ್ಣ ಶಿಲೆಯಲ್ಲಿ ಈ ಸುಂದರ ಮೂರ್ತಿಯನ್ನು ಕೆತ್ತಿಸಿ ತರಲಾಗಿದೆ. ಕಳೆದ ಎರಡು ವರ್ಷಗಳ ಪ್ರಯತ್ನದ ಫಲವಾಗಿ ಇಂದು ಎಲ್ಲರ ಸಮ್ಮುಖದಲ್ಲಿ ಭಕ್ತಿಯಿಂದ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ” ಎಂದು ತಿಳಿಸಿದರು.
ಇದೇ ವೇಳೆ ಮಂಗಸೂಳಿ ಗ್ರಾಮದ ಹಿರಿಯ ಶಾಸ್ತ್ರಿಗಳಾದ ರಘುನಾಥ ಶಾಸ್ತ್ರಿ ದೇಶಿಂಕರ್ ಅವರು ಮಲ್ಲಯ್ಯ ದೇವಸ್ಥಾನದ ಇತಿಹಾಸದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ನರಸಿಂಹವಾಡಿ ದೇವಸ್ಥಾನದ ಶಾಸ್ತ್ರಿಗಳಾದ ದತ್ತಾತ್ರೇಯ ಅಲಾಸ್ಕರ್ ಅವರು ಮಾತನಾಡಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಜಾಗೃತ ದೇವಸ್ಥಾನವೆನಿಸಿದ ಮಂಗಸೂಳಿ ಮಲ್ಲಯ್ಯ ದೇವರ ಮಹಾತ್ಮೆಯನ್ನು ವಿವರಿಸಿದರು.
ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕಾಗಿ ಪೂಜಾರಿ ಮನೆತನದ ಶಾಮರಾವ್ ಪೂಜಾರಿ, ರವೀಂದ್ರ ಪೂಜಾರಿ, ಮುಕುಂದ ಪೂಜಾರಿ, ಅಪ್ಪು ಪೂಜಾರಿ, ರಾಜು ಪೂಜಾರಿ, ಕಾಂತು ಪೂಜಾರಿ ಹಾಗೂ ಆಹಾರ ಇಲಾಖೆಯ ನಿವೃತ್ತ ನಿರ್ದೇಶಕ ಶಂಕರ್ ಪೂಜಾರಿ ಅವರು ವಿಶೇಷ ಶ್ರಮವಹಿಸಿದ್ದಾರೆ.
ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಅಶೋಕ್ ಪಾಟೀಲ್, ದಿಲೀಪ್ ಮಗದುಮ್, ರಾಜು ಕುಲಕರ್ಣಿ, ಚಿದಾನಂದ ಮಾಳಿ, ಸಂಜಯ್ ತಳವಲಕರ್, ಮಿರಾ ಸಾಬ್ ಸಣದಿ, ಖಡಕಲಾಟ ಗ್ರಾಮದ ರಾಕೇಶ್ ಚಿಂಚವಾಡೆ, ಅಮರ್ ಪಟ್ಟಣಶೆಟ್ಟಿ, ರಾಜು ಶೆಟ್ಟಿ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ಭಕ್ತರು ಪಾಲ್ಗೊಂಡು ಪುಣ್ಯ ಸಂಪಾದಿಸಿದರು.

Tags:

error: Content is protected !!