ದೇಶಾದ್ಯಂತ ಶಿವಜಯಂತಿಯ ಸಡಗರ ಮನೆ ಮಾಡಿದ್ದರೆ, ಇತ್ತ ಬಾಗಲಕೋಟೆಯಲ್ಲಿ ಕಿಡಿಗೇಡಿಗಳ ಕೃತ್ಯದಿಂದಾಗಿ ಹಬ್ಬದ ಸಂಭ್ರಮಕ್ಕೆ ಕಪ್ಪುಚುಕ್ಕೆ ಅಂಟಿದೆ. ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಿ ನಾಳೆ ಶ್ರೀರಾಮಸೇನೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

ಬಾಗಲಕೋಟೆ ನಗರದ ಪಂಕಾ ಮಸೀದಿ ಬಳಿ ಶಿವಜಯಂತಿ ಮೆರವಣಿಗೆ ಸಾಗುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಏಕಾಏಕಿ ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದಿದ್ದಾರೆ. ಈ ಅನಿರೀಕ್ಷಿತ ಘಟನೆಯಲ್ಲಿ ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ಸಿಬ್ಬಂದಿ ಹಾಗೂ ಹಲವಾರು ಶಿವಭಕ್ತರು ಗಾಯಗೊಂಡಿದ್ದಾರೆ. ರಾಷ್ಟ್ರಪುರುಷ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ನಡೆದ ಈ ದಾಳಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶ್ರೀರಾಮಸೇನೆಯ ಪ್ರಮುಖ ರವಿಕುಮಾರ್ ಕೋಕಿತಕರ, ಇದೊಂದು ಅತ್ಯಂತ ನಿಂದನೀಯ ಮತ್ತು ಅಪಮಾನಾಸ್ಪದ ಕೃತ್ಯ ಎಂದು ಕಿಡಿಕಾರಿದ್ದಾರೆ. ರಾಷ್ಟ್ರಪುರುಷನಿಗೆ ಮಾಡಿದ ಈ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿರುವ ಅವರು, ಈ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ನಾಳೆ ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶ್ರೀರಾಮಸೇನೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
