ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ. ಅದನ್ನು ಕಂಡು ಹಿಡಿಯುವುದಕ್ಕೆ ಆಗಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಿಕೊಳ್ಳಬೇಕಲ್ವಾ? ಸಿಎಂ ಇದ್ದಾರೆ, ಲೋಕಾಯುಕ್ತ ಇದೆ. ಅವರ ಗಮನಕ್ಕೆ ತರಲಿ. ಬಾಕಿ ಅಷ್ಟೊಂದು ಯಾಕೆ ಇದೆ ಅಂತಾ ಚಿಂತನೆ ಆಗಬೇಕು. ಬಜೆಟ್ ಬೆಂಬಲ ಇಲ್ಲದೇ ಬಿಜೆಪಿ ತನ್ನ ಅವಧಿಯಲ್ಲಿ ಕಾಮಗಾರಿ ಟೆಂಡರ್ ಕೊಟ್ಟಿದೆ. ಆ ರೀತಿ ಬಿಜೆಪಿ ಸರ್ಕಾರ ಮಾಡದೇ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಲಸ ಆಗಿದೆ, ಪೇಮೆಂಟ್ ಮಾಡುವುದಕ್ಕೆ ಸಮಯ ಬೇಕು. ಹಿಂದಿನ ಸರ್ಕಾರ ಮಾಡಿರುವ ತಪ್ಪು ಅದು. ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಜಾಸ್ತಿ ಬಾಕಿ ಇದೆ. ಕಾಮಗಾರಿ ನಿಲ್ಲಿಸುವುದಕ್ಕೆ ಆಗಲ್ಲ, ಅವರಿಗೆ ಕಂಫರ್ಟ್ ಇದ್ದ ಕಡೆ ಟೆಂಡರ್ ಹಾಕೇ ಹಾಕ್ತಾರೆ ಎಂದರು.
ನಮ್ಮಲ್ಲಿರುವ ಬಜೆಟ್ಗೆ ಸರಿದೂಗಿಸುವ ಕೆಲಸ ಮಾಡುತ್ತಿದ್ದೇವೆ. ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮುಂದೆ ತೋರಿಸುತ್ತೇನೆ. ನಾವು ಹೊಸ ವರ್ಕ್ ಕೊಟ್ಟಿಲ್ಲ. ಬ್ಯಾಲೆನ್ಸ್ ಮಾಡುತ್ತಿದ್ದೇವೆ. ನಮ್ಮಿಂದ ಅಪ್ರೂವ್ ತಗೊಂಡಿದ್ದೀರಾ ಅಂತ ಆರ್ಥಿಕ ಇಲಾಖೆ ಕೇಳುತ್ತೆ. ಬೇರೆ ಮಂತ್ರಿಗಳದ್ದು ನಾನು ಉತ್ತರ ಕೊಡುವುದಕ್ಕೆ ಆಗಲ್ಲ. ಅವರೇ ಸ್ಪಷ್ಟನೆ ಕೊಡಬೇಕು. ಆ ಕಡೆಯುವರು ಈ ಕಡೆ ಆರೋಪ ಮಾಡುತ್ತಾರೆ, ಈ ಕಡೆಯವರು ಆ ಕಡೆಗೆ ಆರೋಪ ಮಾಡುತ್ತಾರೆ. ಕಮಿಷನ್ ನಿಯಂತ್ರಣ ಮಾಡಬೇಕು ಅಷ್ಟೇ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನಮ್ಮ ಇಲಾಖೆಯಲ್ಲಿ 12 ಸಾವಿರ ಕೋಟಿ ರೂ. ಬಾಕಿ ಇತ್ತು. ಮೂರು ಸಾವಿರ ಕೋಟಿ ಕೊಡಲಾಗಿದೆ. 9 ಸಾವಿರ ಕೋಟಿ ಬಾಕಿ ಇದೆ. ಅದನ್ನು ಬ್ಯಾಲೆನ್ಸ್ ಮಾಡುತ್ತೇವೆ. ನಾವು ನಿಮಗೆ ಅಪ್ರೂವ್ ಕೊಟ್ಟಿಲ್ಲ ಅಂತಲೂ ಚರ್ಚೆ ಆಗಿದೆ. ನಾವು ಕೊಡುವುದರಲ್ಲೇ ಬ್ಯಾಲೆನ್ಸ್ ಮಾಡಿ ಅಂತ ಚರ್ಚೆ ಆಗಿದೆ. ಇದರಲ್ಲಿ ಅಧಿಕಾರಿಗಳ ಲೋಪ ಎನ್ನಲು ಬರಲ್ಲ. ಹಿಂದಿನ ಸರ್ಕಾರವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಸಚಿವ ಹಚ್.ಸಿ.ಮಹದೇವಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರನ್ನೇ ಕೇಳಬೇಕು. ನಮ್ಮ ಹೈಕಮಾಂಡ್ ಗಟ್ಟಿ ಇದೆ. ಯಾರೂ ಕೂಡ ಅಲ್ಲಾಡಿಸಲು ಆಗಲ್ಲ. ಹೈಕಮಾಂಡ್ ಸ್ಪಷ್ಟಡಿಸಬೇಕು ಎಂಬುದು ನಮ್ಮದೂ ಇದೆ ಎಂದರು.
ಶಾಸಕರ ವಿದೇಶ ಪ್ರವಾಸ ವಿಚಾರವಾಗಿ, ಹಿರಿಯ ಶಾಸಕರು ಮೊದಲಿನಿಂದಲೂ ಹೋಗುತ್ತಿದ್ದಾರೆ. ಕೆಲವರು ದುಬೈಗೆ ಹೋಗಿದ್ದರು, ಯೂರೋಪ್ಗೆ ಹೋಗಿದ್ದರು. ಪಕ್ಷದಲ್ಲಿ ಟೀಂ ಮಾಡುವುದಕ್ಕೆ ಆಗಲ್ಲ. ಇಬ್ಬರೂ ಟೀಂನಲ್ಲಿದ್ದಾರೆ, ಸಮರ್ಥರಿದ್ದಾರೆ. ಕೆಲವರೆಲ್ಲ ಮಾಧ್ಯಮಗಳಿಗೆ ಹೆದರಿ ಹೋಗುವುದನ್ನು ಕೈ ಬಿಟ್ಟರು. ಕೆಲವರು ಹೈಕಮಾಂಡ್ ಹೇಳಿತು ಅಂತ ಹೋಗಲಿಲ್ಲ. ಪಕ್ಷದಲ್ಲಿ ಟೀಂಗಳು ಇದ್ದೇ ಇರುತ್ತದೆ. ನಾವು ಇಲ್ಲೇ ಕೂತು, ಇಲ್ಲೇ ಮಾತನಾಡುತ್ತೇವೆ, ಬಗೆಹರಿಸುತ್ತೇವೆ. ಪ್ರತೀ ವರ್ಷ ಹೋಗುತ್ತಾರೆ. ಅವರ ಸ್ವಂತ ದುಡ್ಡಿನಿಂದ ತೆರಳುತ್ತಾರೆ. ಅವರನ್ನು ನಿಯಂತ್ರಣ ಮಾಡುವುದಕ್ಕೆ ಆಗುತ್ತಾ? ಎಂದು ಜಾರಕಿಹೊಳಿ ಪ್ರಶ್ನಿಸಿದರು.
ಅಧಿಕಾರ ಹಸ್ತಾಂತರ ವಿಚಾರವನ್ನು ಕಾಲ ಬಂದಾಗ ನೋಡೋಣ. ನಾವು ಕೂಡ ನಿಮ್ಮ ಹಾಗೆಯೇ ಕಾಯುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
