BELAGAVI

ಹಳೆ ಪತ್ರಿಕೆ ಮಾರಿದ ಹಣದಿಂದ ವಿದ್ಯಾರ್ಥಿಗೆ ಶಿಕ್ಷಣದ ಆಸರೆ; ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಯಿಂದ ಆರ್ಥಿಕ ನೆರವು!

Share

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣಕಾಸಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬೆಳಗಾವಿಯ ಶಾಂತಾಯಿ ವಿದ್ಯಾ ಆಧಾರ ಸಂಸ್ಥೆಯು ವಿಶಿಷ್ಟ ರೀತಿಯಲ್ಲಿ ನೆರವಾಗುತ್ತಿದೆ. ಮನೆಯಲ್ಲಿನ ಹಳೆ ಪತ್ರಿಕೆ (ರದ್ದಿ) ಮಾರಿ ಸಂಗ್ರಹಿಸಿದ ಹಣದಿಂದ ಇಂದು ನಗರದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬನ ಶಿಕ್ಷಣಕ್ಕೆ ಆರ್ಥಿಕ ಸಹಾಯ ಹಸ್ತ ಚಾಚಿದೆ.

ಬೆಳಗಾವಿ ನಗರದ ರಾಣಿ ಚೆನ್ನಮ್ಮ ನಗರದ ಭಾರತೀಯ ವಿದ್ಯಾಭವನ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ ಇಂದು ಸಂಸ್ಥೆಯ ವತಿಯಿಂದ ಧನಸಹಾಯ ನೀಡಲಾಯಿತು. ಟಿಳಕವಾಡಿಯ ಶಾಂತಾಯಿ ವಿದ್ಯಾ ಆಧಾರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯ ತಂದೆಗೆ ಚೆಕ್ ಹಸ್ತಾಂತರಿಸಲಾಯಿತು. ಮಾಜಿ ಮೇಯರ್ ವಿಜಯ್ ಮೋರೆ ಹಾಗೂ ವಿಜಯ್ ಪಾಟೀಲ ಅವರ ನೇತೃತ್ವದಲ್ಲಿ ಈ ಸಂಸ್ಥೆಯು ಹಳೆಯ ಪತ್ರಿಕೆಗಳು, ಪುಸ್ತಕಗಳು ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಿ, ಅವುಗಳ ಮಾರಾಟದಿಂದ ಬಂದ ಹಣವನ್ನು ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸುತ್ತಿದೆ.

ಈ ಸಂದರ್ಭದಲ್ಲಿ ವಿಶ್ವಾಸ ಪಾಟೀಲ, ವಿನಾಯಕ ಬೊಂಗಾಳೆ ಹಾಗೂ ಅಲನ್ ವಿಜಯ್ ಮೋರೆ ಉಪಸ್ಥಿತರಿದ್ದರು. ವಿನಾಯಕ ಲೋಕೂರು, ಸಂತೋಷ್ ಮಮದಾಪುರ, ಸೂರಜ್ ಗವಳಿ ಸೇರಿದಂತೆ ಹಲವು ಸ್ವಯಂಸೇವಕರು ಈ ವಿಶಿಷ್ಟ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಬಾರದು ಎಂಬ ದೃಢ ಸಂಕಲ್ಪದೊಂದಿಗೆ ಶಾಂತಾಯಿ ವಿದ್ಯಾ ಆಧಾರ ತಂಡವು ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Tags:

error: Content is protected !!