ಪತ್ರಕರ್ತರ ಸೋಗಿನಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಕಲಿ ಜಾಲವೊಂದನ್ನು ಬೆಳಗಾವಿ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಜಿಲ್ಲಾ ನ್ಯಾಯಾಲಯವು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮಹತ್ವದ ಆದೇಶ ಹೊರಡಿಸಿದೆ.

ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಪತ್ರಕರ್ತರೆಂದು ಹೇಳಿಕೊಂಡು ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ನಕಲಿ ಪತ್ರಕರ್ತರ ಹಿಂದಿರುವ ಅಸಲಿ ‘ಮಾಸ್ಟರ್ ಮೈಂಡ್’ ಅನ್ನು ಈಗಾಗಲೇ ಪೊಲೀಸರು ಹೆಡೆಮುರಿ ಕಟ್ಟಿದ್ದು, ಜಾಲದ ಆಳ-ಅಗಲವನ್ನು ಕೆದಕುತ್ತಿದ್ದಾರೆ. ಈ ತಂಡವು ಕೇವಲ ಈ ಅಧಿಕಾರಿಯನ್ನಷ್ಟೇ ಅಲ್ಲದೆ, ಇನ್ನೂ ಎಷ್ಟು ಜನ ಸರ್ಕಾರಿ ಅಧಿಕಾರಿಗಳನ್ನು ಇದೇ ರೀತಿ ಬೆದರಿಸಿ ಹಣ ಸುಲಿಗೆ ಮಾಡಿದೆ ಎನ್ನುವ ಬಗ್ಗೆ ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಮಾಳಮಾರುತಿ ಪೊಲೀಸರು, ಮೂರು ದಿನಗಳ ಅವಧಿಯಲ್ಲಿ ಈ ಜಾಲದ ಕರಾಳ ಮುಖಗಳನ್ನು ಬಯಲಿಗೆಳೆಯಲಿದ್ದಾರೆ. ಜಿಲ್ಲಾ ನ್ಯಾಯಾಲಯದ ಈ ಆದೇಶದಿಂದಾಗಿ ಪೊಲೀಸರಿಗೆ ತನಿಖೆ ನಡೆಸಲು ಹೆಚ್ಚಿನ ಬಲ ಸಿಕ್ಕಂತಾಗಿದ್ದು, ನಕಲಿ ಪತ್ರಕರ್ತರ ಹಾವಳಿಗೆ ಬೆದರಿದ್ದ ಅಧಿಕಾರಿ ವಲಯದಲ್ಲಿ ಈಗ ನಿರಾಳ ಭಾವ ಮೂಡಿದೆ. ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ವಿಚಾರಣೆಯಿಂದ ಈ ಜಾಲದ ಹಿಂದಿರುವ ಪ್ರಭಾವಿಗಳ ಹೆಸರುಗಳು ಕೂಡ ಹೊರಬರುವ ನಿರೀಕ್ಷೆಯಿದೆ.
