ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ತೊಲಗಿಸಲು ಬಾಗಲಕೋಟೆ ತಾಲೂಕಿನ ಮುಚಖಂಡಿ ಎಲ್.ಟಿ ಗ್ರಾಮದ ಜನರು ಮಾದರಿ ನಿರ್ಧಾರ ಕೈಗೊಂಡಿದ್ದಾರೆ. ಇನ್ಮುಂದೆ ನಮ್ಮೂರಿನ ಯುವಕರ ಮದುವೆಗೆ ನಯಾಪೈಸೆ ವರದಕ್ಷಿಣೆ ಪಡೆಯುವುದಿಲ್ಲ ಎಂದು ಗ್ರಾಮದ ಹಿರಿಯರು ಹಾಗೂ ಸ್ವಾಮೀಜಿಗಳು ಮೈಕ್ ಮೂಲಕ ಘೋಷಿಸುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ.

ಸುಮಾರು 2 ಸಾವಿರ ಜನಸಂಖ್ಯೆ ಹೊಂದಿರುವ ಮುಚಖಂಡಿ ಎಲ್.ಟಿ (ತಾಂಡಾ) ಗ್ರಾಮದಲ್ಲಿ ಈ ಹಿಂದೆ ಮದುವೆ ಎಂದರೆ 10-15 ಲಕ್ಷ ನಗದು ಹಾಗೂ ಬಂಗಾರ ನೀಡುವ ಸಂಪ್ರದಾಯವಿತ್ತು. ಆದರೆ, ಇದೇ ತಿಂಗಳ 14 ರಂದು ನಡೆದ ಸಾಗರ್ ರಾಠೋಡ್ ಹಾಗೂ ಕಾವ್ಯಾ ಜೋಡಿಯ ನಿಶ್ಚಿತಾರ್ಥದ ವೇಳೆ ಈ ಸಂಪ್ರದಾಯಕ್ಕೆ ಅಂತ್ಯ ಹಾಡಲಾಗಿದೆ. ಸಾಗರ್ ಅವರ ತಾಯಿ ಕಮಲಾಬಾಯಿ ಅವರ “ವರದಕ್ಷಿಣೆ ರಹಿತ ಸೊಸೆ” ತರುವ ಕನಸಿಗೆ ಅವರ ಮಕ್ಕಳಾದ ರಾಘವೇಂದ್ರ ಹಾಗೂ ಗಿರೀಶ್ ಸಾಥ್ ನೀಡಿದ್ದು, ಇಡೀ ಗ್ರಾಮವೇ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.
ನಿಶ್ಚಿತಾರ್ಥದ ವೇದಿಕೆಯಲ್ಲೇ ಗ್ರಾಮದ ಹಿರಿಯರು ಮೈಕ್ ಹಿಡಿದು, “ಇನ್ಮುಂದೆ ಈ ಗ್ರಾಮದಲ್ಲಿ ನಡೆಯುವ ಯಾವುದೇ ಮದುವೆಗಳಿಗೆ ವರದಕ್ಷಿಣೆ ಪಡೆಯುವುದಿಲ್ಲ” ಎಂದು ಘೋಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಹೆಣ್ಣು ಮಕ್ಕಳ ಮದುವೆ ವೇಳೆಯೂ ಇದೇ ಸರಳತೆಯನ್ನು ಅನುಸರಿಸುವಂತೆ ಗ್ರಾಮಸ್ಥರು ಪರಸ್ಪರ ಮನವಿ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿಯ ಸಮುದಾಯದವರೇ ಹೆಚ್ಚಾಗಿರುವ ಈ ಹಳ್ಳಿಯ ಹಿರಿಯರು ಕೈಗೊಂಡಿರುವ ಈ ದಿಟ್ಟ ನಡೆ ಇಡೀ ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸಿದೆ.
