ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಸೂಚನೆಯಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಗಾಂಜಾ ಸೇವನೆ, ಮಟಕಾ ಜೂಜಾಟ ಮತ್ತು ಮಾರಕಾಸ್ತ್ರ ಪ್ರದರ್ಶಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬೆಳಗಾವಿ ನಗರದ ಖಡೇಬಜಾರ ಮತ್ತು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಮುಖ ಬಂಧನಗಳು ನಡೆದಿವೆ. ಪಾಟೀಲ ಮಾಳ ಗಲ್ಲಿಯ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಾ ಅಸಹಜವಾಗಿ ವರ್ತಿಸುತ್ತಿದ್ದ ಶಾಸ್ತ್ರಿ ನಗರದ ಉತ್ಕರ್ಷ ವರ್ಮಾ ಎಂಬಾತನನ್ನು ಗಾಂಜಾ ಸೇವನೆಯ ಆರೋಪದಡಿ ಖಡೇಬಜಾರ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಅಶೋಕ ನಗರದ ಹೈವೆ ಅಂಡರ್ ಪಾಸ್ ಬಳಿ ತಲವಾರಿನೊಂದಿಗೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಪಾರುಖ ರೆಹಮಾನ ಎಂಬಾತನನ್ನು ಮಾಳಮಾರುತಿ ಪೊಲೀಸರು ಬಂಧಿಸಿ, ಆತನ ಬಳಿಯಿದ್ದ ಹರಿತವಾದ ಆಯುಧವನ್ನು ಜಪ್ತಿ ಮಾಡಿದ್ದಾರೆ.ಇನ್ನು ಜೂಜಾಟದ ವಿರುದ್ಧದ ಸಮರ ಮುಂದುವರೆಸಿರುವ ಮಾರ್ಕೆಟ್ ಠಾಣೆ ಪೊಲೀಸರು, ಖಂಜಾರ ಗಲ್ಲಿಯಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಿಯಾಜ ಫೀವಾಲೆ ಮತ್ತು ಅಶೋಕ ಜಾಧವ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ ಸಂಗ್ರಹವಾದ ಹಣವನ್ನು ಪಡೆಯುತ್ತಿದ್ದ ಮತ್ತೊಬ್ಬ ಆರೋಪಿ ಪಾಹಿಮ ಕೊತ್ವಾಲ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಎಎಸ್ಐ ಚಿನ್ನಸ್ವಾಮಿ, ಪಿಎಸ್ಐ ಹೊನ್ನಪ್ಪ ತಳವಾರ ಮತ್ತು ವಿಠಲ ಹಾವನ್ನವರ ತಂಡಕ್ಕೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
