ರಾಜ್ಯ ಸಾರಿಗೆ ನೌಕರರ ಸಂಭವನೀಯ ಮುಷ್ಕರದ ಎಫೆಕ್ಟ್ ಕುಂದಾನಗರಿ ಬೆಳಗಾವಿಯಲ್ಲಿ ದಟ್ಟವಾಗಿ ಆವರಿಸಿದೆ. ಮುಷ್ಕರ ನಡೆಯಬಹುದು ಎಂಬ ಮುನ್ನೆಚ್ಚರಿಕೆಯಿಂದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುತ್ತಿದ್ದು, ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.
ಬೆಳಗಾವಿ ವಿಭಾಗದಿಂದ ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯಾದ್ಯಂತ ಪ್ರತಿನಿತ್ಯ ಸುಮಾರು 1,400 ಬಸ್‌ಗಳು ಸಂಚರಿಸುತ್ತವೆ. ಬೆಳಗಾವಿ ಡಿಪೋ ಒಂದರಿಂದಲೇ 300ಕ್ಕೂ ಅಧಿಕ ಬಸ್‌ಗಳು ಕಾರ್ಯಚರಿಸುತ್ತವೆ. ಇಂದು ಎಂದಿನಂತೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದರೂ ಸಹ, ಮುಷ್ಕರದ ಭೀತಿಯಿಂದಾಗಿ ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣದ ಆವರಣದಲ್ಲಿ ಜನರಿಲ್ಲದೆ ನೀರವ ಮೌನ ಮನೆಮಾಡಿದೆ.


ಇನ್ನು ಈ ಕುರಿತು ತಮ್ಮ ಅಳಲು ತೋಡಿಕೊಂಡಿರುವ ಸಾರಿಗೆ ನೌಕರರು, “ನಮಗೆ ಬರಬೇಕಿರುವ 38 ತಿಂಗಳ ಹಿಂಬಾಕಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ನಮ್ಮ ಮುಖಂಡರ ನಿರ್ಧಾರವೇ ನಮ್ಮ ನಿರ್ಧಾರ. ರಾಜ್ಯ ಮಟ್ಟದ ಪದಾಧಿಕಾರಿಗಳು ಮುಷ್ಕರಕ್ಕೆ ಕರೆ ನೀಡಿದರೆ ನಾವು ಹೋರಾಟಕ್ಕೆ ಸಿದ್ಧ” ಎಂದು ಹೇಳಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ, ಸಂಜೆಯ ವೇಳೆಗೆ ಮುಷ್ಕರದ ಕುರಿತು ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾದರೆ ಅಂತರರಾಜ್ಯ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ.
