ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿಯ ಅಂಗವಾಗಿ ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನದಲ್ಲಿ ಸಕಲ ಮರಾಠಾ ಸಮಾಜದ ವತಿಯಿಂದ ಭವ್ಯ ಮಾನವಂದನೆ ಹಾಗೂ ಅಭಿವಾದನೆ ಕಾರ್ಯಕ್ರಮ ಜರುಗಿತು.


ಬೆಳಗಾವಿಯ ಸಕಲ ಮರಾಠಾ ಸಮಾಜ (18 ಪಗಡ ಜಾತಿ ಹಾಗೂ 12 ಬಲುತೆದಾರರು) ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿಯನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ನಗರದ ಡಾಕ್ಟರ್ ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಬೆಳಗಾವಿ ಹಾಗೂ ಸುತ್ತಮುತ್ತಲಿನ ಮರಾಠಾ ಸಮಾಜದ ಬಾಂಧವರು ಮತ್ತು ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿವ್ರಾಯರಿಗೆ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮನ್ವಯಕಾರ ಕಿರಣ್ ಜಾಧವ್ ಅವರು, ಬೆಳಗಾವಿ ಭಾಗದಲ್ಲಿ ಮರಾಠಾ ಸಮಾಜದ ಜನಸಂಖ್ಯೆ ಹೆಚ್ಚಿರುವುದರಿಂದ ಸರ್ಕಾರಿ ಶಿವಜಯಂತಿಯನ್ನು ಆಚರಿಸುವಾಗ ಸಮಾಜದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಮುಂದಿನ ವರ್ಷದಿಂದ ಫೆಬ್ರವರಿ 19ರ ಶಿವಜಯಂತಿಯನ್ನು ಮರಾಠಾ ಸಮಾಜದ ಪ್ರತಿನಿಧಿಗಳ ಸಲಹೆ-ಸೂಚನೆಗಳ ಮೇರೆಗೆ ಆಚರಿಸಲಾಗುವುದು ಎಂಬ ಭರವಸೆ ನೀಡಿದರು.

ಇದೇ ವೇಳೆ ಮಹಿಳಾ ನಾಯಕಿ ರೇಣು ಕಿಲ್ಲೇಕರ್ ಮಾತನಾಡಿ, ಶಿವ್ರಾಯರ ಚಾರಿತ್ರ್ಯ ಮತ್ತು ವಿಚಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಗುಣವಂತ್ ಪಾಟೀಲ್ ಅವರು ಪ್ರತಿಯೊಂದು ಮನೆಯಲ್ಲಿ ಶಿವಚರಿತ್ರೆ ಇರಬೇಕೆಂದು ಕರೆ ನೀಡಿದರೆ, ಮಹಾದೇವ ಪಾಟೀಲ್ ಅವರ ಜಯಘೋಷ ಇಡೀ ಪರಿಸರವನ್ನು ಶಿವಮಯವಾಗಿಸಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಅಡ್ವೋಕೇಟ್ ಅಮರ್ ಯಳ್ಳೂರಕರ್, ಗುಣವಂತ್ ಪಾಟೀಲ್, ಸಾಗರ್ ಪಾಟೀಲ್, ಹ.ಭ.ಪ. ಶಂಕರ್ ಬಬ್ಲಿ ಮಹಾರಾಜ್, ಸುನೀಲ್ ಬೊಕಡೆ, ಸುನೀಲ್ ಜಾಧವ್, ರಾಜನ್ ಜಾಧವ್, ಮಹಾದೇವ ಪಾಟೀಲ್, ಮಹಿಳಾ ಘಟಕದ ಮುಖ್ಯಸ್ಥೆ ರೇಣು ಕಿಲ್ಲೇಕರ್, ಭಾತಖಾಂಡೇ, ವಿಪುಲ್ ಜಾಧವ್, ಸಚಿನ್ ಪಾಟೀಲ್ ಸೇರಿದಂತೆ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.
