ಬೆಳಗಾವಿ ಸ್ಮಾರ್ಟ್ ಸಿಟಿಯ ಅಂದವನ್ನು ಹೆಚ್ಚಿಸಲು ಅಳವಡಿಸಲಾಗಿರುವ ಕುಂಡಗಳು ಈಗ ಕಸದ ಬುಟ್ಟಿಗಳಾಗಿ ಪರಿಣಮಿಸುತ್ತಿವೆ. ನಗರದ ಅಶೋಕ ನಗರದಲ್ಲಿ ಮೆಡಿಕಲ್ ಶಾಪ್ ಒಂದರ ಬೇಜವಾಬ್ದಾರಿತನ ಈಗ ಬಯಲಾಗಿದೆ. ರಸ್ತೆ ಬದಿಯ ಗಿಡದ ಕುಂಡಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿದ್ದಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆ ಈಗ ಬಿಸಿ ಮುಟ್ಟಿಸಿದೆ.

ಬೆಳಗಾವಿ ಅಶೋಕ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾದ ಗಿಡದ ಕುಂಡಗಳಲ್ಲಿ ಮೆಡಿಕಲ್ ತ್ಯಾಜ್ಯವನ್ನು ಅಕ್ರಮವಾಗಿ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ, ಸ್ಥಳೀಯ ಮೆಡಿಕಲ್ ಶಾಪ್ ಒಂದಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು 2,000 ರೂಪಾಯಿಗಳ ದಂಡ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಗಿಡಗಳ ಕುಂಡಗಳಲ್ಲಿ ಇಂಜೆಕ್ಷನ್ ಸಿರಿಂಜ್, ಮಾತ್ರೆಗಳ ಕವರ್ ಹಾಗೂ ಇತರೆ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಎಸೆದಿರುವುದು ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಬೇಜವಾಬ್ದಾರಿ ಕ್ರಮವು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಮೂಡಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಾಲಿಕೆಯ ಆರೋಗ್ಯ ನಿರೀಕ್ಷಕರು ಮತ್ತು ಅಧಿಕಾರಿಗಳ ತಂಡ, ಸ್ಥಳ ತಪಾಸಣೆ ನಡೆಸಿ ಸಂಬಂಧಪಟ್ಟ ಮೆಡಿಕಲ್ ಶಾಪ್ಗೆ ದಂಡ ವಿಧಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದಂತೆ ಎಚ್ಚರಿಕೆ ನೀಡಿದ್ದಾರೆ.
