Accident

ರಾಯಬಾಗದಲ್ಲಿ ಘೋರ ರಸ್ತೆ ಅಪಘಾತ: ಲಾರಿಗೆ ಬೈಕ್ ಡಿಕ್ಕಿ, ಒಂದೇ ಕುಟುಂಬದ ಮೂವರು ಸಾವು

Share

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಲಾರಿ ಹಾಗೂ ಬೈಕ್ ನಡುವೆ ನಡೆದ ಈ ಭೀಕರ ಸಂಘರ್ಷದಲ್ಲಿ ದಂಪತಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಸಂಚಾರಿ ನಿಯಮಗಳ ನಿರ್ಲಕ್ಷ್ಯ ಹಾಗೂ ಅತಿವೇಗ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ರಾಯಬಾಗ ತಾಲೂಕಿನ ಅಲಖನೂರ್ ಗ್ರಾಮದ ಬಳಿ ಬುಧವಾರ ಸಂಜೆ ನಡೆದ ಈ ರಸ್ತೆ ಅಪಘಾತವು ಇಡೀ ಗ್ರಾಮವನ್ನೇ ನಡುಗಿಸಿದೆ. ಮೃತರನ್ನು ಗಿರೆಪ್ಪಾ ಕುಂದ್ರಾಳಿ (38), ಮಂಜುಳಾ ಗಿರೆಪ್ಪಾ ಕುಂದ್ರಾಳಿ (28) ಮತ್ತು ಅವರ ಪುತ್ರಿ ಆರಾಧ್ಯಾ (07) ಎಂದು ಗುರುತಿಸಲಾಗಿದೆ. ಮಿರಜ್‌ನಿಂದ ಜಮಖಂಡಿ ಕಡೆಗೆ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಕುಟುಂಬಕ್ಕೆ ಎದುರಿನಿಂದ ಬಂದ ವೇಗದ ಟ್ರಕ್ ಕಾಲನಂತೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಮೂವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿದ ಕೂಡಲೇ ಹಾರೂಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದೇ ಕುಟುಂಬದ ಮೂವರು ಬಲಿಯಾಗಿರುವುದು ಸ್ಥಳೀಯರ ಕಣ್ಣೀರಿಗೆ ಕಾರಣವಾಗಿದ್ದು, ಹೆದ್ದಾರಿಯಲ್ಲಿ ಅತಿವೇಗದ ಚಾಲನೆಯೇ ಈ ದುರಂತಕ್ಕೆ ಮೂಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!