ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಅಪಹರಿಸುವ ಕಿದೀಗಡಿಗಳ ಕೈಚಳಕ ಶುರುವಾಗಿದೆಯೇ ಎಂಬ ಆತಂಕ ಶುರುವಾಗಿದೆ. ಪೀರಣವಾಡಿಯ ನಾಲ್ವರು ಪುಟ್ಟ ಬಾಲಕರನ್ನು ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಮೇಲೆ ಕರೆದೊಯ್ದು ಯಳ್ಳೂರ ಗದ್ದೆಗೆ ಬಿಟ್ಟು ಹೋದ ಘಟನೆ ತಡರಾತ್ರಿ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲೂಕಿನ ಪೀರನವಾಡಿಯ ಗ್ರಾಮದ ಸುಮಾರು 7 ರಿಂದ 8 ವರ್ಷದ ನಾಲ್ವರು ಶಾಲಾ ಬಾಲಕರು ಮಂಗಳವಾರ ಸಂಜೆ ಯೆಳ್ಳೂರ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿದ್ದಾರೆ. ಗಲ್ಲಿಯಲ್ಲಿ ಆಟವಾಡುತ್ತಿದ್ದ ಈ ಬಾಲಕರಿಗೆ “ನಿಮ್ಮನ್ನು ಪ್ರವಾಸಕ್ಕೆ ಕರೆದೊಯ್ಯುತ್ತೇನೆ” ಎಂದು ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಯೆಳ್ಳೂರ ಶಿವಾರಿನಲ್ಲಿ ಬಿಟ್ಟು ಪರಾರಿಯಾಗಿದ್ದನು. ಹೊಲದಲ್ಲಿ ಅನಾಥವಾಗಿ ಅಲೆದಾಡುತ್ತಿದ್ದ ಮಕ್ಕಳನ್ನು ಗಮನಿಸಿದ ಕಾರ್ಲೇಕರ್ ಎಂಬ ರೈತರು, ತಕ್ಷಣ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಬೆಳ್ಳಂಬೆಳಗ್ಗೆಯಿಂದ ಮಕ್ಕಳ ನಾಪತ್ತೆಯಿಂದ ಕಂಗಾಲಾಗಿದ್ದ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಯೆಳ್ಳೂರ ಗ್ರಾಮದ ವಿಠ್ಠಲ ರುಖ್ಮಾಯಿ ದೇವಸ್ಥಾನದ ಬಳಿ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಪೋಷಕರನ್ನು ಕರೆಸಿ, ವಿಚಾರಣೆ ನಡೆಸಿ ಮಕ್ಕಳನ್ನು ಸುಬ್ರೂಪವಾಗಿ ಹಸ್ತಾಂತರಿಸಲಾಗಿದೆ. ಮಕ್ಕಳನ್ನು ಕರೆದೊಯ್ದ ಆ ಕಿರಾತಕ ಯಾರು? ಆತನ ಉದ್ದೇಶವೇನಿತ್ತು? ಎಂಬ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಘಟನೆ ಪೋಷಕರಲ್ಲಿ ಭೀತಿ ಹುಟ್ಟಿಸಿದೆ.
