BELAGAVI

ಬೆಳಗಾವಿ ಹೂವಿನ ಮಾರುಕಟ್ಟೆ ವಿವಾದ ಸುಖಾಂತ್ಯ: ಸರ್ಕಾರಿ ಮಾರುಕಟ್ಟೆಗೆ ಮರಳಿದ ವ್ಯಾಪಾರಿಗಳು; ಡಿಸಿ ಅವರಿಂದ ಸಬ್ ಮಾರ್ಕೆಟ್ ಭರವಸೆ!

Share

ಬೆಳಗಾವಿಯ ಹೂವಿನ ಸಗಟು ಮಾರುಕಟ್ಟೆ ವಿವಾದ ಕೊನೆಗೂ ತಣ್ಣಗಾಗಿದೆ. ಶಾಸಕ ಆಸೀಫ್ ಸೇಠ್ ಸಂಧಾನ ಮತ್ತು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ, ಖಾಸಗಿ ಮಾರುಕಟ್ಟೆ ನಂಬಿ ಹೋಗಿದ್ದ ವ್ಯಾಪಾರಿಗಳು ಮತ್ತೆ ಸರ್ಕಾರಿ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಬೆಳಗಾವಿಯಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಖಾಸಗಿ ಹೂವಿನ ಸಗಟು ಮಾರುಕಟ್ಟೆ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಾಸಕ ಆಸೀಫ್ ಸೇಠ್ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ವ್ಯಾಪಾರಿಗಳ ಹಿತರಕ್ಷಣೆಗೆ ಪೂರಕವಾದ ನಿರ್ಧಾರ ಕೈಗೊಳ್ಳಲಾಗಿದೆ.

ಬೆಳಗಾವಿಯ ದಂಡು ಮಂಡಳಿ (ಕ್ಯಾಂಟ್ ಮೆಂಟ್) ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಖಾಸಗಿ ಮಾರುಕಟ್ಟೆಯು ಎಪಿಎಂಸಿ ನಿಯಮಗಳಿಗೆ ಬಾಹಿರವಾಗಿದೆ ಎಂದು ಸರ್ಕಾರಿ ಮಾರುಕಟ್ಟೆಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಜಿಲ್ಲಾಧಿಕಾರಿಗಳು, ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರೊಂದಿಗೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ನಿಯಮಬಾಹಿರ ಚಟುವಟಿಕೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ರೈತರು ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸಭೆಯ ಬಳಿಕ ಮಾತನಾಡಿದ ಶಾಸಕ ಆಸೀಫ್ ಸೇಠ್, “ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಾಪಾರಿಗಳಿಗೆ ನೆರವಾಗುವುದು ನಮ್ಮ ಕರ್ತವ್ಯ. ಹೂವಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ಅಧಿಕೃತ ಪರವಾನಿಗೆ ನೀಡಿ, ಎಪಿಎಂಸಿಯ ಸಬ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಸಕಲ ಅನುಕೂಲ ಮಾಡಿಕೊಡಲಾಗುವುದು” ಎಂದು ಭರವಸೆ ನೀಡಿದರು. ಇದರಿಂದಾಗಿ ಇನ್ನು ಮುಂದೆ ರೈತರು ಎಂದಿನಂತೆ ಸರ್ಕಾರಿ ಮಾರುಕಟ್ಟೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ವ್ಯಾಪಾರ ನಡೆಸಲು ಹಾದಿ ಸುಗಮವಾದಂತಾಗಿದೆ.

ಇನ್ನು ಹೂವಿನ ಸಗಟು ವ್ಯಾಪಾರಿ ಆಯೇಷಾ ಸನದಿ ಅವರು ಈಗಾಗಲೇ ದಂಡು ಮಂಡಳಿ ಮಾರುಕಟ್ಟೆಗೆ ಹೋಗಿದ್ದ ಸಗಟು ವ್ಯಾಪಾರಸ್ಥರ ಮನವೊಲಿಸಿ ಅವರನ್ನ ಮರಳಿ ಹಳೆಯ ಸರ್ಕಾರಿ ಮಾರುಕಟ್ಟೆಗೆ ಕರೆ ತರಲಾಗಿದೆ. ಅವರಿಗಾದ ಅನಾನೂಕೂಲತೆಯನ್ನು ಹೋಗಲಾಡಿಸಿ, ಅವರಿಗೆ ಆವಶ್ಯಕ ಸೌಲಭ್ಯ ಒದಗಿಸಲು ಆಗ್ರಹಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಕೂಡ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮತ್ತೊಂದು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಸರ್ಕಾರಿ ಮಾರುಕಟ್ಟೆ ಇರುವಾಗ ಎಪಿಎಂಸಿ ಅನುಮತಿಯಿಲ್ಲದೇ ಬೇರೆ ಮಾರುಕಟ್ಟೆ ಸ್ಥಾಪಿಸಿ ಸಗಟು ಮಾರುಕಟ್ಟೆಗೆ ಅವಕಾಶವಿರುವುದಿಲ್ಲ. ವ್ಯಾಪಾರಿಗಳು ಮತ್ತು ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದ್ದು, ಎಪಿಎಂಸಿಯಲ್ಲಿ ವ್ಯಾಪಾರ ಮಾಡಲೂ ಅವಕಾಶವನ್ನು ನೀಡುವುದಾಗಿ ತಿಳಿಸಲಾಗಿದೆ. ಅಲ್ಲದೇ ತೋಟಗಾರಿಕೆ ಇಲಾಖೆಯ ಮೂಲಕ ಈಗಾಗಲೇ ಒಂದು ಹೂವಿನ ಮಾರುಕಟ್ಟೆಯನ್ನು ಹರಾಜು ಮಾಡಲೂ ನೀಡಲಾಗಿದ್ದು, ಅಲ್ಲಿಯೇ ಮಳಿಗೆಗಳನ್ನು ಹೆಚ್ಚಿಸಿ ಎಪಿಎಂಸಿ ಅಡಿಯಲ್ಲಿ ಸಬ್ ಮಾರ್ಕೇಟ್ ಮಾಡಲೂ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದು, ಇದಕ್ಕೆ ಎಲ್ಲ ವ್ಯಾಪಾರಿಗಳು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಸದ್ಯಕ್ಕೆ ಈ ಸಮಸ್ಯೆಯನ್ನು ನಮ್ಮ ಹಂತದಲ್ಲಿ ಬಗೆಹರಿಸಲಾಗಿದೆ ಎಂದರು.

Tags:

error: Content is protected !!