BELAGAVI

ಬಸವಣ್ಣವರ ವಚನಗಳು ವಿಶ್ವಸತ್ಯವೆನಿಸಿವೆ: ಡಾ.ಸರಸ್ವತಿ ಕಳಸದ

Share

ಬಸವಣ್ಣನವರ ವಚನಗಳಲ್ಲಿ ಜೀವನ ಮೌಲ್ಯಗಳು ಹಾಸುಹೊಕ್ಕಾಗಿವೆ. ಒತ್ತಡದ ಬದುಕಿನಲ್ಲಿ ಇರುವ ನಮಗೆ ಸಂಜೀವಿನಿಯಾಗಿವೆ. ವಚನಗಳಲ್ಲಿ ಸಾಮಾಜಿಕ ನ್ಯಾಯವನ್ನು, ದೈವಿಕ ಅನುಭೂತಿಯನ್ನು ಅತ್ಯಂತ ಮನೋಜ್ಞವಾಗಿ ಬಸವ ಹಾಗೂ ಇತರ ಶರಣರು ಕಟ್ಟಿಕೊಟ್ಟಿದ್ದಾರೆ. ಅದು ನಮ್ಮ ಜೀವನದ ಅನುಕರಣೆಯ ಭಾಗವಾಗಬೇಕೆಂದು ವಿಶ್ರಾಂತ ಪ್ರಾಚಾರ್ಯೆ ಡಾ.ಸರಸ್ವತಿ ಕಳಸದ ಹೇಳಿದರು.

ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಲಾಗಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು ವಿಷಯ ಕುರಿತು ಮಾತನಾಡಿದರು. ಬಸವಾದಿ ಪ್ರಮಥರು, ಸಮಾಜದಲ್ಲಿ ಬೇರು ಬಿಟ್ಟಿದ ಜಾತಿ ಹಾಗೂ ವರ್ಣಾಶ್ರಮ ಪದ್ಧತಿಯನ್ನು ತೊಡೆದು ಹಾಕಲು ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯನ್ನು ಮಾಡಿದರು. ಜಾತಿ, ಲಿಂಗ, ವರ್ಗದಲ್ಲಿ ಸರ್ವಸಮಾನತೆಯನ್ನು ನೀಡಿದರು. ಅವರ ಸಮಾಜಮುಖಿ ಹೋರಾಟದಿಂದ ಹನ್ನೆರಡನೆಯ ಶತಮಾನ ಇತಿಹಾಸದ ಪುಟಗಳಲ್ಲಿ ದಾಖಲಿಸುವಂತಾಯಿತು. ಅವರು ನೀಡಿದ ಸಮಾನತೆಯನ್ನು ಇಂದಿಗೂ ನಮ್ಮಲ್ಲಿ ತರಲು ಸಾಧ್ಯವಾಗುತ್ತಿಲ್ಲ. ಜಾತಿ ಧರ್ಮಗಳಿಂದ ನಾವು ಸಮಾಜವನ್ನು ಒಡೆಯುತ್ತಿರುವುದು ಖೇದಕರವೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಶರಣರ ವಚನಗಳು ಸಮಾಜಕ್ಕೆ ದಿವ್ಯೌಷಧಿಗಳಾಗಿ. ನಮ್ಮ ಯುವಜನಾಂಗಕ್ಕೆ ಅವುಗಳನ್ನು ಮುಟ್ಟಿಸುವ ಗುರುತರ ಕಾರ್ಯ ನಡೆಯಬೇಕಾಗಿದೆ. ಮಹಾಸಭೆಯು ಸುಭಾಷನಗರದಲ್ಲಿ ಮುನ್ನಡೆಸುತ್ತಿರುವ ಸಮಾಜದ ಉಚಿತ ಹಾಸ್ಟೇಲ್‌ದಲ್ಲಿ ವಿದ್ಯಾರ್ಥಿನಿಯರಿಗೆ ಲಿಂಗದೀಕ್ಷಾ ವಿಧಾನ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಅವರ ಬಸವ ಸಂದೇಶದ ದೀಕ್ಷೆಯನ್ನು ನೀಡಲಾಯಿತು. ನಮ್ಮ ಯುವಜನಾಂಗ ಹೆಚ್ಚು ಹೆಚ್ಚು ವಚನಗಳನ್ನು ಓದು ಹವ್ಯಾಸ , ಮನನ ಮಾಡಿಕೊಳ್ಳುವ ರೂಢಿಯನ್ನು ಇಟ್ಟುಕೊಳ್ಳಬೇಕೆಂದು ಕರೆನೀಡಿದರು.
ಆಶೀರ್ವಚನ ನೀಡಿದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ʼ ನಮ್ಮ ಮಕ್ಕಳು ವಿದೇಶಕ್ಕೆ ಹೋಗಿ ಕೆಲಸಕ್ಕೆ ಸೇರಿದರೆ ನಾವು ಬಹಳ ಹೆಮ್ಮೆ ಪಡುತ್ತೇವೆ. ಆದರೆ ವೃದ್ಧ ತಂದೆ ತಾಯಿಯರನ್ನು ಅವರು ನೋಡುವುದು ಸಾಧ್ಯವೇ ಇಲ್ಲ. ನಮ್ಮ ದೇಶದ ಪ್ರತಿಭೆಗಳು ಇಲ್ಲಿಯೇ ಉಳಿದು ದೇಶ ಸೇವೆಗೈಯಬೇಕು. ನಮ್ಮ ಕೌಟುಂಬಿಕ ಸಂಬಂಧಗಳು ವಿಘಟನೆಯಾಗಬಾರದು. ಶರಣರ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ಅಸಂಖ್ಯ ಅವುಗಳನ್ನು ಅರಿತು ನಡೆಯಬೇಕೆಂದು ತಿಳಿಸಿದರು.

ಅನಿತಾ ಮಾಲಗತ್ತಿ ವಚನ ಪ್ರಾರ್ಥನೆ ಮಾಡಿದರು. ಸುಧಾ ಪಾಟೀಲ ಸ್ವಾಗತಿಸಿದರು. ಮಂಜುಶ್ರೀ ಹಾವಣ್ಣವರ ವಚನ ವಿಶ್ಲೇಷಣೆ ಮಾಡಿದರು. ವೈಷ್ಣವಿ ಚೌಗಲೆ ಅತಿಥಿ ಪರಿಚಯ ಮಾಡಿದರು. ಎಂ.ವಾಯ್‌.ಮೆಣಸಿನಕಾಯಿ ನಿರೂಪಿಸಿದರು. ವಿ.ಕೆ.ಪಾಟೀಲ ವಂದಿಸಿದರು. ಡಾ.ಎಫ್‌.ವ್ಹಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಸೋಮಲಿಂಗ ಮಾವಿನಕಟ್ಟಿ, ಪ್ರಸಾದ ಹಿರೇಮಠ, ಬಾಲಚಂದ್ರ ಬಾಗಿ, ಸರೋಜನಿ ನಿಶಾನದಾರ, ವಿದ್ಯಾ ಹುಂಡೇಕರ, ಆರ್.ಪಿ.ಪಾಟೀಲ, ಜ್ಯೋತಿ ಬದಾಮಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!