ಬೆಳಗಾವಿಯಿಂದ ಹುನಗುಂದ-ಮಾಪಸಾ ಮಾರ್ಗವಾಗಿ ಚಲಿಸುವ ಕೆಎಸ್ಸಾರ್ಟಿಸಿ ಬಸ್ಗಳು ಖಾನಾಪುರ ಬಸ್ ನಿಲ್ದಾಣಕ್ಕೆ ಬಾರದೆ, ಹೈವೇ ಮೂಲಕವೇ ಸಂಚರಿಸುವ ಮೂಲಕ ಪ್ರಯಾಣಿಕರಿಗೆ ವಂಚಿಸುತ್ತಿವೆ. ಈ ಬೇಜವಾಬ್ದಾರಿತನವನ್ನು ಗಮನಿಸಿದ ಕರ್ನಾಟಕ ಯುವರಕ್ಷಣಾ ವೇದಿಕೆಯ ಕಾರ್ಯಕರ್ತರು ಮಧ್ಯರಾತ್ರಿಯೇ ಬಸ್ ತಡೆದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಬೆಳಗಾವಿಯಿಂದ ಬರುವ ಹುನಗುಂದ-ಮಾಪಸಾ ಕೆಎಸ್ಸಾರ್ಟಿಸಿ ಬಸ್ಗಳು ಖಾನಾಪುರ ಬಸ್ ನಿಲ್ದಾಣಕ್ಕೆ ಬಾರದೆ ಹೊರಗಡೆಯಿಂದಲೇ ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಪ್ರಯಾಣಿಕರು ಕಾದು ಕುಳಿತಿದ್ದರೂ, ಸಮಯ ಉಳಿಸುವ ನೆಪದಲ್ಲಿ ಚಾಲಕರು ನಿಲ್ದಾಣಕ್ಕೆ ಬಸ್ ತರದೆ ಹೈವೇ ಮೂಲಕವೇ ಪರಾರಿಯಾಗುತ್ತಿದ್ದರು. ಇದನ್ನು ಖಂಡಿಸಿದ ಕರ್ನಾಟಕ ಯುವರಕ್ಷಣಾ ವೇದಿಕೆಯ ಖಾನಾಪುರ ತಾಲೂಕಾ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸ್ಥಳಕ್ಕೆ ಧಾವಿಸಿ ಬಸ್ ತಡೆದು ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ಹಾಕಿದ್ದಾರೆ.
“ನಿಲ್ದಾಣದಲ್ಲಿ ಮಹಿಳೆಯರು, ವಯೋವೃದ್ಧರು ಬಸ್ಸಿಗಾಗಿ ಪರದಾಡುತ್ತಿದ್ದರೆ ನಿಮ್ಮ ಬೇಜವಾಬ್ದಾರಿತನವೇನು?” ಎಂದು ಚಾಲಕ ಮತ್ತು ನಿರ್ವಾಹಕರನ್ನು ಸಂಘಟನೆಯ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳಕ್ಕೆ ಬಂದ ಸಂಚಾರಿ ಗಸ್ತು ಪೊಲೀಸರು ಮಧ್ಯಸ್ಥಿಕೆ ವಹಿಸಿ, ಬಸ್ಸನ್ನು ಕಡ್ಡಾಯವಾಗಿ ನಿಲ್ದಾಣಕ್ಕೆ ಕಳುಹಿಸುವಂತೆ ಸೂಚಿಸಿದರು. ರಾತ್ರಿ ವೇಳೆಯಲ್ಲಿ ಪ್ರಯಾಣಿಕರ ಕಷ್ಟಕ್ಕೆ ಸ್ಪಂದಿಸಿದ ಕರ್ನಾಟಕ ಯುವರಕ್ಷಣಾ ವೇದಿಕೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
