ಹಿಂಡಲಗಾ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಸರ್ಪ್ರೈಸ್ ವಿಸಿಟ್: ಭದ್ರತಾ ವೈಫಲ್ಯದ ವಿರುದ್ಧ ಗುಡುಗಿದ ಪೊಲೀಸ್ ಮಹಾ ನಿರ್ದೇಶಕರು!
ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಂದು ಸಂಚಲನ ಸೃಷ್ಟಿಯಾಗಿದೆ. ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಮಂಗಳವಾರ ಜೈಲಿಗೆ ಅನಿರೀಕ್ಷಿತ ಭೇಟಿ ನೀಡಿ, ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.


ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು ಮಂಗಳವಾರ ಬೆಳಗಾವಿ ತಾಲೂಕಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದರು. ಜೈಲಿನ ಒಳಭಾಗ ಮತ್ತು ಹೊರಭಾಗದ ಭದ್ರತಾ ವ್ಯವಸ್ಥೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಅವರು, ಕೈದಿಗಳ ಮೇಲ್ವಿಚಾರಣೆ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿದರು. ಈ ವೇಳೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ ಡಿಜಿಪಿ, ಜೈಲಿನೊಳಗೆ ಯಾವುದೇ ಅಕ್ರಮ ಚಟುವಟಿಕೆಗಳು ನಡೆದರೆ ಆಯಾ ವಿಭಾಗದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಸ್ಪಷ್ಟಪಡಿಸಿದರು.
ಪರಿಶೀಲನೆ ವೇಳೆ ಜೈಲಿನ ತಾಂತ್ರಿಕ ಭದ್ರತೆಯ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಕಾರಾಗೃಹದಲ್ಲಿ 5ಜಿ ಜಾಮರ್ ವ್ಯವಸ್ಥೆ ಅಳವಡಿಸಿದ್ದರೂ ಸಹ ಕೆಲವು ಕಡೆ ನೆಟ್‌ವರ್ಕ್ ಸಿಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಅಲ್ಲದೆ, ಜೈಲಿನ ಹೊರಗಿನಿಂದ ಕಿಡಿಗೇಡಿಗಳು ಮೊಬೈಲ್ ಫೋನ್ ಹಾಗೂ ಮಾದಕ ವಸ್ತುಗಳನ್ನು ಜೈಲಿನ ಆವರಣದೊಳಗೆ ಎಸೆಯುತ್ತಿರುವ ಆರೋಪಗಳ ಬಗ್ಗೆಯೂ ಅಲೋಕ್ ಕುಮಾರ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಂತಹ ಲೋಪದೋಷಗಳಿಗೆ ತಕ್ಷಣವೇ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.
ಜೈಲಿನ ಭದ್ರತೆಯಲ್ಲಿ ಯಾವುದೇ ರೀತಿಯ ಸಡಿಲಿಕೆಯನ್ನು ಸಹಿಸುವುದಿಲ್ಲ ಎಂದು ಗುಡುಗಿದ ಡಿಜಿಪಿ, ನಿಗಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸೂಚಿಸಿದರು. ಈ ಮಹತ್ವದ ಸಭೆಯಲ್ಲಿ ಬಂಧಿಖಾನೆ ಇಲಾಖೆ ಉತ್ತರ ವಲಯದ ಐಜಿಪಿ ಟಿ.ಪಿ. ಶೇಷಾ, ಐಜಿಪಿ ಚೇತನ್ ಸಿಂಗ್ ರಾಥೋಡ್, ಪೊಲೀಸ್ ಕಮಿಷನರ್ ಭೂಷಣ್ ಬೋರಸೆ, ಎಸ್ಪಿ ಕೆ. ರಾಮರಾಜನ್ ಹಾಗೂ ಜೈಲು ಅಧೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
